ಭಾಷಾಶಾಸ್ತ್ರ, ರಾಜಕಾರಣ, ಅರ್ಥಶಾಸ್ತ್ರ, ಪತ್ರಿಕೋದ್ಯಮ ಹಾಗೂ ಕನ್ನಡ ಭಾಷಾ ಸಾಹಿತ್ಯದ ಕುರಿತು ಅಧ್ಯಯನ ನಡೆಸಿದವರಲ್ಲಿ ಪ್ರಮುಖರು ರಾ, ಯ. ಧಾರವಾಡಕರ್ ಅವರು. ಇವರು ಜನಿಸಿದ್ದು 1919 ಜುಲೈ 15ರಂದು. ತಂದೆ ಯಲಗುರ್ದರಾವ್, ತಾಯಿ ಗಂಗಾಬಾಯಿ. ಬಾಗಲಕೋಟೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮುಂಬೈ ವಿಶ್ವವಿದ್ಯಾಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಸಾಂಗ್ಲಿಯ ವಿಲ್ಲಿಂಗ್‌ಡನ್‌ನಲ್ಲಿ ಬಿ.ಎ. ಪದವಿ ಪಡೆದರು. ಕನ್ನಡ ಹಾಗೂ ಇಂಗ್ಲಿಷ್ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು.
ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿರುವ ಇವರು ಪತ್ರಿಕಾ ವ್ಯವಸಾಯ, ಕರ್ನಾಟಕದಲ್ಲಿ ವೃತ್ತ ಪತ್ರಿಕೆಗಳು, ಸಾಹಿತ್ ಸಮೀಕ್ಷೆ, ಕನ್ನಡ ಭಾಷಾ ಶಾಸ್ತ್ರ, ಧೂಮ್ರವಲಯಗಳು, ತೂರಿದ ಚಿಂತನೆಗಳು, ನವಿಲುಗರಿ ಮತ್ತು ಸೂರ್ಯಪಾನ, ಅಮೆರಿಕನ್ ನಿಗ್ರೋ ಕಥೆಗಳು ಮತ್ತು ಸಾಗರೋತ್ತರ ಕಥೆಗಳು, ವೆಂಕಟರಂಗೋಕಟ್ಟಿ, ಶ್ರೀನಮನ, ಡಾ. ನಂದಿಮಠರ ನೆನಪು, ರೊದ್ದ ಶ್ರೀನಿವಾಸರಾಯರು, ಕಾವ್ಯಾನಂದ, ಲೋಕಮಾನ್ಯ ತಿಲಕರು, ವಿಜಯದುಂದುಭಿ, ಭೀಷ್ಮಪರ್ವಸಂಗ್ರಹ, ಕರ್ಮಯೋಗಿ ಹಾಗೂ ಗಾಂಧಿಸಾಹಿತ್ಯಪುಣೇಕರ ತೆರೆಯ ಹಿಂದೆ ಇವರು ರಚಿಸಿದ ಕೃತಿಗಳು.
ಇವರಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಾರ್ವಜನಿಕ ಸೇವಾ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗ ಸಂದಿವೆ. ಇವರು 1991ರ ಏಪ್ರಿಲ್ 12ರಂದು ಈ ಲೋಕವನ್ನಗಲಿದರು.