‘ಕಾಲರಂಗ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಒಂದು ವಿಶಿಷ್ಟ ಪ್ರವಾಸಕಥನವಾಗಿದೆ. ಈ ಕೃತಿಯು 24 ಅಧ್ಯಾಯಗಳಾದ ಗೊಂಡವನ, ಜನಸಾಮಾನ್ಯ, ಸಂತೆ, ವಿದ್ಯಾವಂತರು, ರಾಜ್ಯದ ಆದಿವಾಸಿಗಳು, ಪ್ರಾಣಿ ಪ್ರಪಂಚ, ಭೀಮವೆಟಕಾ, ಮುನ್ನಿಮಾ, ಕಲಾಕಾರರು, ಭುಜಲಿಯಾ, ಧೂಪಗಡ, ವಾಕಣಕಾರರೊಂದಿಗೆ, ಖಜುರಾಹೊ ಕಾಮಿನಿಯರು, ಬಾರಸೂರ, ಶೇಖ್ ಗುಲಾಬ್, ತಿರಥಗಡ್, ಮುರಿಯಾ ಮೇಲಾ, ಭಾಂಕೇರ, ಚಮೇಲಿ ಮುರಿಯರ ಇರುಳು ಜೀವನ, ವನಸಿರಿ, ಧಾರ್ಮಿಕರು, ಆದಿವಾಸಿಗಳ ಅತಿಥ್ಯಗಳನ್ನು ಒಳಗೊಂಡಿದೆ.
ಈ ಕೃತಿಯಲ್ಲಿನ ಮರುಮುದ್ರಣದ ಮುನ್ನುಡಿಯಲ್ಲಿ ಕೆಲವೊಂದು ವಿಚಾರಗಳು ಹೀಗಿವೆ : ಆದಿಮಾನವನಿಂದ ಅತ್ಯಾಧುನಿಕ ಅಮೇರಿಕನ್‌ರವರೆಗಿನ ಮನುಷ್ಯಜಾತಿಯ ಬದುಕು, ಸಾಧನೆಗಳನ್ನು ಕಣ್ಣಾರೆ ಕಂಡು ಅರಿಯಲು, ಅರಿತದ್ದನ್ನು ದಾಖಲಿಸಲು, ಕೃಷ್ಣಾನಂದ ಕಾಮತರಿಗೆ ಅಪರಿಮಿತ ಆಸಕ್ತಿ ಇತ್ತು ಇದನ್ನು ಸಾಧಿಸಲು ಅವರು ಎಷ್ಟೇ ಶ್ರಮ ವಹಿಸಲುಸಿದ್ಧರಿದ್ದರು. ಇದಕ್ಕಾಗಿ ಅವರು ಲಭ್ಯವಿದ್ದ ವಿಮಾನ ಸಮುದ್ರಯಾನ, ಟ್ರೇನು, ಬಸ್‌ಗಳನ್ನು ಬಳಸಿದರೂ, ಇಷ್ಟಪಟ್ಟದ್ದು ಕಾಲ್‌ನಡಿಗೆಯನ್ನು, ಅಭಿವ್ಯಕ್ತಿಗೆ ಬಳಸಿದ್ದು ಕೆಮರಾ, ಕುಂಚ, ಲೇಖನಿಗಳನ್ನು; ಬರವಣಿಗೆಗೆ ವಿಶೇಷತಃ ಇಷ್ಟಪಟ್ಟಿದ್ದು ಪ್ರವಾಸ ಕಥನದ ಮಾಧ್ಯಮವನ್ನು, ಅವರ ಇಪ್ಪತ್ನಾಲ್ಕು ಕೃತಿಗಳಲ್ಲಿ ಹತ್ತು ಗ್ರಂಥಗಳು ಪ್ರವಾಸಕಥನಗಳಾದರೆ, ಇನ್ನೂ ಎಂಟು ಪ್ರವಾಸಾಧಾರಿತವೇ ಆಗಿವೆ ! ಐವತ್ತಕ್ಕೂ ಮೀರಿದ ಲೇಖನಗಳು ಪ್ರವಾಸಪ್ರೇಮವನ್ನು ಸಾರುತ್ತವೆ. ಪ್ರತ್ಯಕ್ಷ ಕಂಡು ಕ್ಯಾಮರಾಧಾರಿತವಾಗಿದ್ದ ಅವರ ಬರವಣಿಗೆ, ಈ ಕಾರಣದಿಂದಾಗಿ ಸಾರ್ವಕಾಲಿಕವಾಗಿದೆ. ಭರದಿಂದ ಬದಲಾಗುತ್ತಿರುವ ನಮ್ಮ ಜನಜೀವನವನ್ನು ಸೆರೆಹಿಡಿದಿಡುವ ಪ್ರಾಮಾಣಿಕ ಪ್ರಯತ್ನವಾಗಿ ಪರಿಣಸಿದೆ. ಮನೋಹರ ಗ್ರಂಥ ಮಾಲೆಯೇ ಕಾಮತರ ನಾಲ್ಕು ಪ್ರವಾಸ ಕಥನಗಳನ್ನು ಪ್ರಕಟಿಸಿದೆ. ಅವರ ಮೊದಲ ಕೃತಿ “ನಾನೂ ಅಮೇರಿಕೆಗೆ ಹೋಗಿದ್ದ' (1968) ದಿಂದ ಕೊನೆಯ ಕೃತಿ, “ಮರು ಪಯಣ' (2001) ಹಾಗೂ ನಡುವಿನ ವಂಗದರ್ಶನ (1971) ಮತ್ತು ಕಾಲರಂಗ (1983) ಗಳನ್ನು ಪ್ರಕಟಿಸಿದ ಹೆಚ್ಚಳ ಈ ಗ್ರಂಥಮಾಲೆಯದು. 'ಕಾಲರಂಗ' ಇಪ್ಪತ್ತೇಳು ವರ್ಷಗಳ ಬಳಿಕ ಮರು ಮುದ್ರಣ ಕಾಣುತ್ತಿದೆ. ಈ ಅವಧಿಯಲ್ಲಿ ಜನ ಜೀವನದಲ್ಲಿ ಅಲ್ಲದೇ ಭೌಗೋಲಿಕವಾಗಿಯೂ ರಾಜಕೀಯವಾಗಿಯೂ ಭಾರತ, ಬಹಳಷ್ಟು ಬದಲಾವಣೆಗಳನ್ನು ಕಂಡಿದೆ. ಹೀಗಾಗಿ, ಮಧ್ಯಪ್ರದೇಶ ರಾಜ್ಯದ ಮಿಂಚುನೋಟಗಳನ್ನು ಒದಗಿಸುವ ಈ ಪುಸ್ತಕ ಹಿಂದೆಂದಿಗಿಂತಲೂ ಪ್ರಸ್ತುತವಾಗಿದೆ. ಕಾಮತರು ವ್ಯಾಪಕವಾಗಿ ಸಂಚರಿಸಿದ ಬಸ್ತರ ಜಿಲ್ಲೆ, (ಇದೊಂದೇ ಜಿಲ್ಲೆ ಆಗ ಕೇರಳ ರಾಜ್ಯಕ್ಕಿಂತ ವಿಸ್ತಾರವಾಗಿತ್ತು !) 2001 ರಲ್ಲಿ ನಿರ್ಮಾಣವಾದ ಛತ್ತೀಸಗಡ ರಾಜ್ಯದಲ್ಲಿ ಸೇರ್ಪಡೆಯಾಗಿದೆ. ದೇಶದ ಒಟ್ಟು ಆದಿವಾಸಿ ಜನಾಂಗಗಳ ಶೇಕಡಾ 36:2 ರಷ್ಟು ಸಂಖ್ಯೆ ಈ ಒಂದು ಮಧ್ಯಪ್ರದೇಶದಲ್ಲೇ ಹಿಂದೆ ವಾಸವಾಗಿತ್ತು. ಅವರಲ್ಲಿ ಸುಮಾರು ನಲವತ್ತು ಪ್ರಭೇದದ ಸಮೂಹಗಳಿವೆ. ಸಹಸ್ರಮಾನಗಳ ಕಾಲ, ಈ ಬುಡಕಟ್ಟಿನವರು ನಿಸರ್ಗದೊಂದಿಗೆ ಒಂದಾಗಿ ಬಾಳಿ ಬಂದವರು, ನೈಸರ್ಗಿಕ ಪ್ರಕೋಪಗಳನ್ನು ಎದುರಿಸಿದವರು. ಕಾಮತರು 1976-77ರಲ್ಲಿ ಅಲ್ಲಿ ಸಂಚರಿಸಿದಾಗಲೂ ಹೆಚ್ಚಿನ ಬದಲಾವಣೆಗಳು ಇರಲಿಲ್ಲ ಎಂದು ವಿಶ್ಲೇಷಿತವಾಗಿದೆ.
©2024 Book Brahma Private Limited.