ಮಗಲಾಯಿ ಹುಡುಗನ ಪಾರೆನ್ ಟೂರು-ಲೇಖಕ ಸಿದ್ದು ಯಾಪಲಪರವಿ ಅವರ ಇಂಗ್ಲೆಂಡ್ ಪ್ರವಾಸ ಕಥನ. ಚಿತ್ರದುರ್ಗದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬ್ರಹನ್ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಕೃತಿಗೆ ಬೆನ್ನುಡಿ ಬರೆದು ‘ಆತ್ಮವಂಚನೆಗೆ ಅವಕಾಶ ಇಲ್ಲದಂತೆ ಸರಳವಾಗಿ ವಿಷಯ ನಿರೂಪಣೆ ಇದೆ. ಎಲ್ಲನ್ನೂ ಬಿಚ್ಚಿಡುವ ಪ್ರಾಮಾಣಿಕತೆ ಇದೆ. ನಾವೂ ಸಹ ಆ ದೇಶದಲ್ಲಿ ಇಣುಕಿ ಹಾಕಿದ ಅನುಭವವಾಗುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಸಾಹಿತಿ ಬೀದರನ ಬಿ.ಜಿ. ಸಿದ್ಧಬಟ್ಟೆ ಅವರು ಕೃತಿಯ ಕುರಿತು ‘ಪ್ರಬುದ್ಧರಾದ ಮೇಲೂ ಮುಗ್ಧತೆಯಿಂದ ಬದುಕುವುದು ಒಂದು ಸವಾಲು. ಅದಕ್ಕೆ ಉದಾಹರಣೆ, ಸಿದ್ದು ಯಾಪಲಪರವಿ ಹಾಗೂ ಅವರ ‘ಮಗಲಾಯಿ ಹುಡುಗನ ಪಾರಿನ್ ಟೂರು’ ಕೃತಿ. ಈ ಪ್ರವಾಸ ಕಥನವು ಮಡಿವಂತಿಕೆಗಳನ್ನು ದೂರವಿಟ್ಟು ಅದೆಷ್ಟೋ ಸಂಗತಿಗಳನ್ನು ಚರ್ಚಿಸುತ್ತದೆ. ಬಿಸಿ ಅಪ್ಪುಗೆ ಚುಂಬನಗಳ ಚುಂಬಕತೆ, ಲೈಂಗಿಕ ಎದೆಗಾರಿಕೆಯ ಗತ್ತು, ಲಿವಿಂಗ್ ಟುಗೆದರ್ ದಾಂಪತ್ಯ, ಗೇ, ಲೆಸ್ಬಿಯನ್ಸ್: ಲೈಂಗಿಕ ಹಕ್ಕು, ಖಾಸಗಿ ಬದುಕಿನ ಗುಟ್ಟುಗಳನ್ನು, ಹೆಣ್ಣು-ಗಂಡು ಮತ್ತು ತೃತೀಯ ಲಿಂಗಿಗಳ ದೈಹಿಕ-ಮಾನಸಿಕ ತಲ್ಲಣಗಳನ್ನು ವಾಸ್ತವಿಕ ನೆಲೆಯಲ್ಲಿ ಸೆರೆ ಹಿಡಿದಿರುವುದು ವಿನೂತನ. ದಶಕದ ಹಿಂದೆ ಅವಾಸ್ತವ ಎನಿಸಿದ್ದ ಸಂಗತಿಗಳ ಮೇಲೆ ದೂರಾಲೋಚನೆಯ ಬೆಳಕು ಚೆಲ್ಲಿದ್ದು ಗಮನಿಸಬಹುದು. ಇಲ್ಲಿಯ ಬರಹಗಳು ಸೆಕ್ಸಿ ಎನಿಸಿದರೂ ಓದುಗನ ಚಿತ್ತ ವಿಚಲಿತಗೊಳಿಸದ ಚಾಕಚಕ್ಯತೆ ಇದೆ. ಬರಹ ಪ್ರಾಮಾಣಿಕವಾಗಿದೆ. ಆ ಕಾರಣಕ್ಕಾಗಿ, ತಾಜಾತನವಿದೆ. ಕುರುಡು ನಂಬಿಕೆಗೆ ಬಲಿಯಾಗದ ಸಾತ್ವಿಕ ಮನೋಧರ್ಮವಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.