‘ಯೂರೋಪ್ ನಾಡಿನಲ್ಲಿ’ ಲೇಖಕ ಎಸ್. ನಾಗಕಲಾಲ (ಎನ್.ವಾಯ್. ಈಳಗೇರ) ಅವರ ಪ್ರವಾಸ ಕಥನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಹಸನ್ ನಯೀಂ ಸುರಕೋಡ ಅವರು, ಗೆಳೆಯ ನಾಗಕಲಾಲ, ವಿದೇಶ ಪ್ರವಾಸ ಮಾಡಿ ಬಂದಿದ್ದಾರೆ. ಆ ಅವಕಾಶ ತಮಗೆ ಸಿಕ್ಕಿದ್ದಕ್ಕೆ ಸಂಭ್ರಮಿಸಿದ್ದಾರೆ. ಅದು ಸಹಜವೇ. ತಮ್ಮ ಪ್ರವಾಸದ ಬಗ್ಗೆ ಪುಸ್ತಕ ಬರೆದು, ಬೆನ್ನುಡಿ ಬರೆಯಲು ಕೇಳಿಕೊಂಡಿದ್ದಾರೆ. ಜರ್ಮನಿ ಹಾಗೂ ಯುರೋಪಿನ ಹಲವಾರು ದೇಶಗಳನ್ನು ಸುತ್ತಿ ಬಂದಿರುವ ನಾಗಕಲಾಲ,ಆ ದೇಶಗಳ ಐತಿಹಾಸಿಕ ಸ್ಥಳ ಪರಿಚಯದ ಜೊತೆ ಅಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಕನ್ನಡದಲ್ಲಿ ಪ್ರವಾಸ ಸಾಹಿತ್ಯವೆನ್ನುವುದು ಒಂದು ವಿಶಿಷ್ಟ ಪ್ರಕಾರ. ಒಂದು ಶತಮಾನದಷ್ಟು ಹಳೆಯದಾದ ಈ ಪ್ರಕಾರದಲ್ಲಿ, ಸುಮಾರು ಆರು ನೂರಕ್ಕೂ ಹೆಚ್ಚು ಪುಸ್ತಕಗಳು ಬಂದಿವೆಯಂತೆ. ವಿದೇಶ ಪ್ರವಾಸ ಮಾಡಿದವರೆಲ್ಲರೂ ಆ ಕುರಿತು ಪುಸ್ತಕ ಬರೆಯಲೇಬೇಕೆಂದೇನಿಲ್ಲ. ‘ಕೋಶ ಓದು ದೇಶ ಸುತ್ತು’ ಎನ್ನುವ ಗಾದೆ ಇದೆ. ಪುಸ್ತಕದಿಂದ ದೊರೆತ ಜ್ಞಾನ ಸಾಕು ಎನ್ನಲಾಗದು. ದೇಶ ನೋಡಿ ಗಳಿಸಿಕೊಳ್ಳುವ ಜ್ಞಾನವೇನೂ ಕಡಿಮೆಯಿಲ್ಲ. ಹೀಗೆ ಕೃತಿಕಾರ ಬರೆದ ಪುಸ್ತಕದಿಂದ ಓದುಗರಿಗೆ ಪ್ರಯೋಜನವಾಗುವುದು. ಜೊತೆಗೆ ಇಂತಹ ಕೃತಿಯಿಂದ ಕೃತಿಕಾರನಿಗೂ ಖಂಡಿತ ಲಾಭವಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿ. ಕೃ ಗೋಕಾಕರಿಗೆ ಕಾವ್ಯದ ಮುಖ್ಯ ಪ್ರೇರಣೆಯೇ ಪ್ರವಾಸ ಎಂದು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅಭಿಪ್ರಾಯ ಪಟ್ಟಿದ್ದಾರೆ. ಗೆಳೆಯ ನಾಗಕಲಾಲ ಪತ್ರಕರ್ತ ಹಾಗೂ ಕವಿಯಾಗಿದ್ದಾರೆ. ಏನಿಲ್ಲವೆಂದರೂ ಯುರೋಪ ಪ್ರವಾಸದಿಂದ ಅವರ ಕವಿ ಹೃದಯ ಅರಳಬೇಕು’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.