ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿರುವ ಶ್ರೀಮತಿ ಸಂಗೀತಾ ಮಠಪತಿಯವರು, ಸ್ವತಃ ಸಾಹಿತಿಗಳೂ ಹೌದು. ಇವರು ಸಾಹಿತ್ಯದ ವಿವಿಧ ಪ್ರಕಾರದ ಕೃತಿಗಳನ್ನು ರಚಿಸಿ, ಈಗಾಗಲೇ ಸಾಹಿತ್ಯಾಸಕ್ತರ ಮನ ಗೆದ್ದಿದ್ದಾರೆ. ರಾಮಾಮೃತ-ವಚನ ಸಂಕಲನ, ಭಾವಾಮೃತ-ಕವನ ಸಂಕಲನ ಹಾಗೂ ಸತ್ಯಾಮೃತ-ಅಬಾಬಿ ಸಂಕಲನ ಎಂಬ ಮೂರು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡುವ ಮೂಲಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಇದೀಗ ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಭಾಗದ ವಿಷಯವನ್ನೇ ಪ್ರಮುಖ ಪರಿಕಲ್ಪನೆಯಾಗಿಟ್ಟುಕೊಂಡು ಪ್ರಥಮ ಪ್ರಯತ್ನದಲ್ಲಿ ತಮ್ಮ ವಿಭಾಗಕ್ಕೆ ಕೊಡುಗೆ ನೀಡುವ ಹಂಬಲದೊಂದಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ-ಒಂದು ಪಕ್ಷಿನೋಟ ಎಂಬ ಈ ವಿಶೇಷ ಕೃತಿಯನ್ನು ತಮ್ಮೆಲ್ಲರ ಓದಿಗಾಗಿ ಅರ್ಪಿಸಿದ್ದಾರೆ. ಬಹುಶಃ ಒಬ್ಬ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿ ಸಾಹಿತ್ಯದ ಗೀಳಿನೊಂದಿಗೆ, ತನ್ನ ವಿಷಯದಲ್ಲೂ ಕೃತಿ ಹೊರತರುವ ಸಾಹಸಕ್ಕೆ ಕೈ ಹಾಕಿದ್ದು ಸಂಗೀತಾರವರ ಭವಿಷ್ಯದ ಸಾಧನೆಯ ಹಿರಿದಾದ ಮೆಟ್ಟಿಲೆಂದರೆ ಅತಿಶಯೋಕ್ತಿಯಾಗಲಾರದು. ಈ ಕೃತಿ ಹೊಂದಿರುವ ಅಂಶಗಳು ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಷಯದ ವ್ಯಾಸಂಗದಲ್ಲಿ ತೊಡಗಿರುವ, ಅದರಲ್ಲೂ ಕನ್ನಡ ಮಾಧ್ಯಮದಿಂದ ಬಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲಕರವಾಗಲಿವೆ. ಈ ಕೃತಿಯು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಹಲವಾರು ಮೂಲ ಅಂಶಗಳ ವಿವರಣೆಗಳನ್ನು ಒಳಗೊಂಡಿದೆ. ಶ್ರೀಮತಿ ಸಂಗೀತಾ ಮಠಪತಿ ಅವರಿಂದ ಇನ್ನಷ್ಟು-ಮತ್ತಷ್ಟು ಹೆಚ್ಚಿನ ವಿಶೇಷ, ವಿಭಿನ್ನ ಮತ್ತು ವಿನೂತನವಾದ ಕೃತಿಗಳು ಹೊರಬರಲೆಂದು ಮನಸಾ ಶುಭ ಹಾರೈಸುವೆ ಅಭಿನಂದನೆಗಳು, ಶುಭವಾಗಲಿ....! ಶ್ರೀ ವಿಶ್ವನಾಥ ಅರಬಿ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಯುವ ಸಾಹಿತಿಗಳು ವಿಜಯಪುರ
ನನ್ನ ವಿದ್ಯಾರ್ಥಿನಿಯಾದ ಶ್ರೀಮತಿ ಸಂಗೀತಾ ಮಠಪತಿಯವರು ಆಹಾರ ಸುರಕ್ಷತೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹು ಜನರಿಗೆ ತಲುಪಿಸಲು ಒಂದೊಳ್ಳೆಯ ಪುಸ್ತಕವನ್ನು ಕನ್ನಡದಲ್ಲಿ ಬರೆದಿರುವುದು ನಮ್ಮ ವಿಭಾಗಕ್ಕೆ ಹೆಮ್ಮೆಯ ಸಂಗತಿಯಾಗಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕುರಿತು ಇಂಗ್ಲೀಷ್ ನಲ್ಲಿ ಸಾಕಷ್ಟು ಪುಸ್ತಕಗಳು ಲಭ್ಯವಿವೆ. ಆದರೆ, ಕನ್ನಡದಲ್ಲಿ ಸಿಗುವುದು ಬಹಳ ವಿರಳ. ಅಂತಹ ಒಂದು ವಿಷಯದಲ್ಲಿ ಉಪಯುಕ್ತ ಮಾಹಿತಿಯನ್ನೊಳಗೊಂಡ, ಒಂದು ಸಣ್ಣ ಪುಸ್ತಕವನ್ನು ನಮ್ಮ ವಿದ್ಯಾರ್ಥಿನಿಯಾದ ಶ್ರೀಮತಿ ಸಂಗೀತಾ ಮಠಪತಿಯವರು ತುಂಬಾ ಆಸಕ್ತಿ ವಹಿಸಿ, ಶ್ರದ್ಧೆಯಿಂದ ಬರೆದಿದ್ದಾರೆ. ಈ ಪುಸ್ತಕ ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಷಯದ ಕುರಿತು ಅಧ್ಯಯನ ಮಾಡುವ ಸಾಕಷ್ಟು ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ಕೈಪಿಡಿಯಾಗುತ್ತದೆ. ಇದರಲ್ಲಿ ನಮ್ಮ ವಿದ್ಯಾರ್ಥಿನಿ ಆಹಾರ ಸುರಕ್ಷತೆ, ಕಲಬೆರಕೆಯಿಂದಾಗುವ ತೊಂದರೆಗಳು, ಆಹಾರದ ಕಾನೂನುಗಳು ಮತ್ತು ಪೌಷ್ಠಿಕಾಂಶದ ಲೇಬಲಿಂಗ್ ಗಳ ಕುರಿತು ಹೀಗೆ ಒಂಬತ್ತು ಘಟಕಗಳಲ್ಲಿ ಆಹಾರ ಸುರಕ್ಷತೆಯ ವಿವಿಧ ವಿಶ್ಲೇಷಣೆಯನ್ನು ಮಾಡಿದ್ದಾಳೆ. ಈ ಕೃತಿ ವಿದ್ಯಾರ್ಥಿಗಳಿಗೆ ಮತ್ತು ಆಹಾರದ ಬಗ್ಗೆ ತಿಳಿದುಕೊಳ್ಳುವ ಹಂಬಲವಿರುವವರಿಗೆಲ್ಲ ಒಂದು ಒಳ್ಳೆಯ ದಿಕ್ಸೂಚಿಯಾಗುವುದೆಂದು ಹೇಳಿದರೆ ತಪ್ಪಾಗಲಾರದು. ಶ್ರೀಮತಿ ಸಂಗೀತಾ ಮಠಪತಿಯವರು ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿದ್ದಾರೆ. ಅಲ್ಲದೇ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರ ಮುಂಬರುವ ದಿನಗಳು ಸುಗಮವಾಗಿ ಸಾಗಲಿ ಮತ್ತು ಅವರ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಮನಸಾ ಶುಭ ಹಾರೈಸುತ್ತೇನೆ. ಹೀಗೆ ಇನ್ನೂ ಅನೇಕ ಕನ್ನಡ ಸಾಹಿತ್ಯದಲ್ಲಾಗಲಿ, ಆಹಾರದ ತಿಳುವಳಿಕೆಯ ಮೇಲಾಗಲಿ ಮತ್ತು ಪೌಷ್ಠಿಕಾಂಶಗಳ ಮೇಲಾಗಲಿ ಕನ್ನಡದಲ್ಲಿ ಉತ್ತಮ ಪುಸ್ತಕಗಳು ಹೊರಬರಲೆಂದು ಆಶಿಸುತ್ತೇನೆ. ಶುಭವಾಗಲಿ.....
ಡಾ. ರೇಣುಕಾ ಮೇಟಿ
ಮುಖ್ಯಸ್ಥರು,
ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಭಾಗ,
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ.
ಸಾಹಿತ್ಯದ ಕ್ಷೇತ್ರದಲ್ಲಿ ನಿರಂತರವಾಗಿ ನಿರತವಾಗಿರುವ ಶ್ರೀಮತಿ ಸಂಗೀತಾ ಮಠಪತಿಯವರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ತಮ್ಮ ವ್ಯಾಸಂಗದ ನೈಪುಣ್ಯತೆಯನ್ನು ಬರವಣಿಗೆಯ ಕುಂಚದಲ್ಲಿ ಹೊತ್ತಿಗೆಯಾಗಿ ಹೊರತಂದ ಲೇಖಕರ ಪ್ರಯತ್ನ ನಿಜಕ್ಕೂ ಹೆಮ್ಮೆಯ ವಿಷಯ. ವಿಜ್ಞಾನಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಪುಸ್ತಕಗಳು ಲಭ್ಯವಿಲ್ಲದಿರುವುದು ಚಿರಪರಿಚಿತ. ಅದರಲ್ಲೂ ಅನ್ವಯಿಕ ವಿಜ್ಞಾನ ವಿಷಯಗಳ ಕುರಿತಾದ ಮಾಹಿತಿ ಪ್ರಾದೇಶಿಕ ಭಾಷೆಗಳಲ್ಲಿ ದೊರಕುವುದು ಅತೀ ವಿರಳ ಎಂದೇ ಹೇಳಬಹುದು. ಆಹಾರ ವಿಜ್ಞಾನ ಮತ್ತು ಪೋಷಣೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಪುಸ್ತಕವು ಅದರಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ, ಆಹಾರೋಧ್ಯಮದಲ್ಲಿ ತೊಡಗಿಸಿಕೊಂಡಿರುವ ಬಹುತೇಕರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿರ್ವಹಣೆಗೆ ದಾರಿದೀಪವಾಗಲಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿರ್ವಹಣೆ ಬಗೆಗಿನ ಅಗಾಧವಾದ ಮಾಹಿತಿ ಕಣಜವನ್ನು ವಿವಿಧ ಆಯಾಮಗಳಲ್ಲಿ ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ವಿಭಾಗದ ವಿದ್ಯಾರ್ಥಿನಿಯಾಗಿ ವಿವಿಧ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿರುವಂಥವರು ತಮ್ಮ ವಿಷಯದಲ್ಲಿ ಕೈಗೊಂಡಂತಹ ಈ ಪ್ರಯತ್ನ ಶ್ಲಾಘನೀಯ ಹಾಗೂ ವಿಭಾಗಕ್ಕೂ ಮತ್ತು ವಿಶ್ವವಿದ್ಯಾನಿಲಯಕ್ಕೂ ಹೆಮ್ಮೆಯ ಸಂಗತಿ. ಈ ರೀತಿಯ ಪ್ರಯತ್ನಗಳು ಲೇಖಕರಿಂದ ನಿರಂತರವಾಗಿ ನೆರವೇರಲೆಂಬ ಹಾರೈಕೆಯೊಂದಿಗೆ.....
ಡಾ. ನಟರಾಜ ದುರ್ಗಣ್ಣವರ
ಸಹಾಯಕ ಪ್ರಾಧ್ಯಾಪಕರು
ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಭಾಗ
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ
ಮನುಷ್ಯನ ದಿನನಿತ್ಯದ ಬದುಕನ್ನು ಹಸನುಗೊಳಿಸುವುದಕ್ಕೆ ಅಗತ್ಯವಾಗಿ ಬೇಕಾದ ವಿವೇಕ, ಸಮಾಧಾನ, ವ್ಯವಧಾನಗಳನ್ನು ಆತ್ಮೀಯವಾದ ಶೈಲಿಗಳಲ್ಲಿ ಮಂಡಿಸುವ ಈ ಬರವಣಿಗೆ ಕ್ರಮದಲ್ಲಿ-ಪ್ರಸಂಗ, ದೃಷ್ಟಾಂತ, ಕಥನ ಎಲ್ಲವೂ ಬೆರೆಯುತ್ತಾ ಹೋಗುತ್ತದೆ. ಜ್ಞಾನ, ವಿವೇಕವನ್ನು ಸರಿಯಾದ ಕ್ರಮದಲ್ಲಿ ತಿಳಿಸುವ ಒಂದು ಧೀರ್ಘ ಪರಂಪರೆ ಹಿಂದಿನಿಂದ ಇದ್ದರೂ ಆಧುನಿಕರನ್ನು ಏಕೋ ಈ ಮಾದರಿ ಸೆಳೆದಿಲ್ಲ. ಇಂತಹ ಸಮಯದಲ್ಲಿ ಹೊಸ ತಲೆಮಾರಿನ ಆಧುನಿಕ ಸಾಹಿತಿಗಳ ಸಾಲಿನಲ್ಲಿ ಬೆಳೆಯುತ್ತಿರುವ ಶ್ರೀಮತಿ ಸಂಗೀತಾ ಮಠಪತಿಯವರು ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿರುವುದು ಒಂದು ಹೆಮ್ಮೆಯ ವಿಚಾರವಾಗಿದೆ. ಈಕೆ ನನ್ನ ವಿದ್ಯಾರ್ಥಿನಿಯಾಗಿರುವುದು ಕೂಡ ಒಂದು ಹೆಮ್ಮೆಯ ವಿಚಾರವೇ ಸರಿ. ಇವಳು ಈಗಾಗಲೇ ಮೂರು ಅತ್ತ್ಯುತ್ತಮ ಕೃತಿಗಳನ್ನು ಬರೆದಿದ್ದಾಳೆ.
ಪ್ರಾಚೀನ ಕಾಲದಲ್ಲಿ ಆಹಾರವು ಕಲಬೆರಕೆ ರಹಿತವಾಗಿ ಉತ್ತಮವಾಗಿರುತ್ತಿತ್ತು. ಆದರೆ ಈಗ ನಾವು ಸೇವಿಸುವ ಪ್ರತಿಯೊಂದು ಆಹಾರವು ಕಲುಷಿತವಾಗಿರುತ್ತದೆ ಅಥವಾ ಕಲಬೆರಕೆಯಿಂದ ಕೂಡಿರುತ್ತದೆ. ಇಂತಹ ಸಮಯದಲ್ಲಿ ಆಹಾರ ಸುರಕ್ಷತೆಯ ಬಗ್ಗೆ ಜನರಿಗೆ ಉಪಯುಕ್ತ ಮಾಹಿತಿಯನ್ನು ನೀಡಲು ಆಹಾರದ ಬಗ್ಗೆ ಸ್ನಾತಕೋತ್ತರ ಪದವಿ ಪಡೆದು, ಅಧ್ಯಯನ ಮಾಡಿ, ಸಂಶೋಧನೆ ಕೈಗೊಂಡು ಕಲುಷಿತ ಆಹಾರ, ಕಲಬೆರಕೆ ಆಹಾರ, ಸರಿಯಾದ ಕ್ರಮದಲ್ಲಿ ಪ್ಯಾಕ್ ಮಾಡಿರದ ಆಹಾರದಿಂದ ಆಗುವ ತೊಂದರೆಗಳು ಮತ್ತು ಇಂತಹ ಆಹಾರಗಳನ್ನು ಉಪಯೋಗಿಸುವ ಸರಿಯಾದ ಕ್ರಮಗಳನ್ನು ಸಂಶೋಧಿಸಿ ಒಂದು ಪುಸ್ತಕವನ್ನಾಗಿ ಕನ್ನಡದಲ್ಲಿ ಹೊರತಂದಿರುವುದು ಹೆಮ್ಮೆಯ ವಿಚಾರ. ಇದೇ ರೀತಿ ಹೆಚ್ಚೆಚ್ಚು ಉಪಯುಕ್ತ ಮಾಹಿತಿಗಳನ್ನು ಪುಸ್ತಕ ರೂಪದಲ್ಲಿ ಬರೆದು ಜನರಿಗೆ ತಲುಪಿಸಲಿ ಎಂದು ಈ ಮೂಲಕ ಆಶಿಸುತ್ತೇನೆ.
ಡಾ. ಸವಿತಾ ಹುಲಮನಿ
ಸಹಾಯಕ ಪ್ರಾಧ್ಯಾಪಕರು
ಆಹಾರ ಸಂಸ್ಕರಣೆ ಮತ್ತು ಪೋಷಣೆ
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಜಯಪುರ
©2024 Book Brahma Private Limited.