ಲೇಖಕ ಎ.ಪಿ. ಭಟ್ ಪುತ್ತೂರು ಅವರು ಕಾಯಿಲೆಗಳಿಗೆ ಸಂಬಂಧಿಸಿದಂತೆ ಜನಮಾನಸದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬರೆದ ಲೇಖನಗಳ ಸಂಗ್ರಹ ಕೃತಿ ಇದು. ಸಣ್ಣ ಸಣ್ಣ ಜ್ವರಕ್ಕೂ ಇಂದಿನ ಜನತೆ ಅನಗತ್ಯವಾದ ಔಷಧಿಗಳಿಗೆ ಮೊರೆ ಹೋಗುವುದು ಸಾಮಾನ್ಯವಾಗಿದೆ. ಇದು ಎಷ್ಟು ಸರಿ? ಎಂಬ ವಿಚಾರವೂ ಸೇರಿದಂತೆ ರೋಗದ ಪತ್ತೆಯನ್ನು ಹೇಗೆಮಾಡುವುದು, ಅದನ್ನು ಹೇಗೆ ಎದುರಿಸುವುದು ಇತ್ಯಾದಿ ಮುಂಜಾಗ್ರತೆ ಕ್ರಮಗಳು ಸೇರಿದಂತೆ ಕಾಯಿಲೆಗಳನ್ನು ಎದುರಿಸುವ ಬಗೆಯನ್ನು ಅತ್ಯಂತ ಸರಳವಾಗಿ ವಿವರಿಸಿದ ಕೃತಿ ಇದು. ಕೆಲವು ಕಾಯಿಲೆಗಳ ಬಗ್ಗೆ ಇದ್ದ ಪೂರ್ವಗ್ರಹಗಳನ್ನೂ, ಮೂಢನಂಬಿಕೆಗಳನ್ನು ಸಹ ಈ ಕೃತಿಯ ವಿಚಾರಗಳು ದೂರ ಮಾಡುತ್ತದೆ.
ಡಾ. ಎ.ಪಿ. ಭಟ್ ಇವರ "ವೈದ್ಯನ ವಗೈರೆಗಳು" ಕೃತಿ ನಾನು ಅನುಭಾವಿಸಿದಂತೆ. ರೋಗ, ರೋಗದ ಲಕ್ಷಣಗಳು, ರೋಗಗಳಿಗೆ ಚಿಕಿತ್ಸೆ ಇತ್ಯಾದಿಗಳ ಬಗ್ಗೆ ಜನಸಾಮಾನ್ಯರಲ್ಲಿ ಮಾತ್ರವಲ್ಲ ಜನಮಾನಸದಲ್ಲೇ ಹಲವಾರು ಭ್ರಾಂತಿ, ತಪ್ಪು ಕಲ್ಪನೆಗಳಿವೆ. ಅವುಗಳು ಹಾಗೇ ಮುಂದುವರಿಯಬಿಟ್ಟರೆ ವ್ಯಾಪಾರೀ ಮನಸ್ಥಿತಿಯ ಲೋಕಕ್ಕೆ ಲಾಭದಾಯಕ! ಆದರೆ ಡಾ. ಎ.ಪಿ. ಭಟ್ ರವರ "ವೈದ್ಯನ ವಗೈರೆಗಳು" ಅಂತಹ ಹಲವು ಭ್ರಾಂತಿಗಳಿಂದ ಜನರನ್ನು ಹೊರಗೆಳೆದು ನಿಲ್ಲಿಸುತ್ತದೆ. ಉದಾಹರಣೆಗೆ "ಲೆಪ್ಟಾಸೈರಾ" ಎಂಬ ಬ್ಯಾಕ್ಟೀರಿಯಾದಿಂದ ಬರುವ ಜ್ವರಕ್ಕೆ "ಇಲಿಜ್ವರ" ಎಂದು ನಾಮಕರಣ ಮಾಡಿರುವುದರಿಂದ ಗಣಪತಿ ವಾಹನವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ ಜನತೆಗೆ ಲೇಖಕರು ಜ್ಞಾನೋದಯ ಉಂಟು ಮಾಡಿದ್ದಾರೆ. "ಪ್ಲೆಟ್ ಲೆಟ್ ಸದ್ದು ಗದ್ದಲ ಇಲ್ಲದೆ ನಮ್ಮ ಶರೀರದಲ್ಲಿ ಕೆಲಸ ಮಾಡುತ್ತಿದ್ದವು. ಯಾರೂ ಗಮನಿಸಲಿಲ್ಲ. ಪ್ಲೇಟ್ ಲೆಟ್ ಗಳನ್ನು ಜನಪ್ರಿಯಗೊಳಿಸಿದ ಶ್ರೇಯ ಡೆಂಗ್ಯೂಗೆ ಸಲ್ಲಬೇಕು" ಎಂದಿರುವುದು ದುಡಿಯುವ ಜನರನ್ನು ಗುರುತಿಸದ ನಮ್ಮ ಗುಣವನ್ನು ನಮಗೆ ಎತ್ತಿ ತೋರಿಸುತ್ತದೆ. ಈ ಪ್ಲೇಟ್ಲೆಟ್ ಗಳನ್ನು ಸದ್ದುಗದ್ದಲವಿಲ್ಲದೇ ಮನೆಯಲ್ಲಿ ಕೆಲಸ ಮಾಡುವ ಮನೆಯ ಹೆಂಡತಿ (house wife!)ಗೆ ಹೋಲಿಸಿರುವುದು ಲೇಖಕರ ಹಾಸ್ಯ ಪ್ರಜ್ಞೆಯಷ್ಟನ್ನಲ್ಲದೇ ನಮ್ಮ ನಿರ್ಲಕ್ಷ್ಯಭಾವವನ್ನು ನಮಗೇ ತೋರಿಸುತ್ತದೆ. ಈ ಪ್ಲೇಟ್ ಲೆಟ್ ಅಜ್ಞಾನ ನ್ಯೂಜಿಲೆಂಡ್ ನ ದುಬಾರಿ ಕಿವಿ ಹಣ್ಣಿಗೆ ದುಂಬಾಲು ಬೀಳುವ ಜನರ ಬಗ್ಗೆ ವೈದ್ಯರು ಬರೆದಿರುವುದು ನನ್ನನ್ನೂ ನಾಚಿಸಿತು. ಏಕೆಂದರೆ ಡೆಂಗ್ಯೂ ರೋಗಿಯನ್ನು ನೋಡಲು ಆಸ್ಪತ್ರೆಗೆ ಹೋಗಿದ್ದ ನನ್ನ ಕೈಯ್ಯಲ್ಲಿದ್ದ ಪ್ಲಾಸ್ಟಿಕ್ ಚೀಲದಲ್ಲಿನ ಕಿವಿ ಹಣ್ಣು ಮುಸಿಮುಸಿ ನಗುತ್ತಿದ್ದುದನ್ನು ಆಗ ನಾನು ಗಮನಿಸಿರಲಿಲ್ಲ. "ಹೃದಯದ ಒಳಗೆ ರಕ್ತವಿದ್ದರೂ ಅದರ ಮಾಂಸಖಂಡಗಳಿಗೆ ಕೊರೋನರಿ ಆರ್ಟರಿ ಎಂಬ ಅಪದಮನಿಯಿಂದ ರಕ್ತ ಸರಬರಾಜು ಆಗುವುದನ್ನು ಡೀಸೆಲ್ ಟ್ಯಾಂಕರ್ ಲಾರಿಗೆ ಲೇಖಕರು ಹೋಲಿಸಿರುವುದು ಇಷ್ಟವಾಯಿತು. ಡೀಸೆಲ್ ಟ್ಯಾಂಕರ್ ತಾನು ಹೊತ್ತು ಸಾಗುವ ಬೃಹತ್ ಗಾತ್ರದ ಟ್ಯಾಂಕರ್ ನ ಅಗಾಧ ಇಂಧನ ಪಡೆಯದೇ ತನ್ನದೇ ಬೇರೆ ಟ್ಯಾಂಕ್ ನಿಂದ ಇಂಧನ ಪಡೆದಂತೆ ಎಂದಿದ್ದಾರೆ ಲೇಖಕರು. ತಮ್ಮ ಮನೆಗೆಲಸಕ್ಕೆ ಕಚೇರಿ ವಾಹನ, ಕಚೇರಿ ಸಿಬ್ಬಂದಿಯನ್ನು ಬಳಸಿಕೊಳ್ಳುವ ಸರಕಾರದ ಕೆಲ ಉನ್ನತ ಅಧಿಕಾರಿಗಳು ಈ ನಮ್ಮ ಹೃದಯ, ಇಂಧನದ ಟ್ಯಾಂಕರ್ ಲಾರಿಯಿಂದ ಪಾಠ ಕಲಿಯಬೇಕಾಗಿದೆ. ಜಾಂಡಿಸ್ ನ್ನೇ ಬಹುತೇಕ ಎಲ್ಲರೂ ಒಂದು ರೋಗವೆಂದು ನಂಬಿದ್ದರು. ಅದು ಯಾವುದೋ ರೋಗದ ಲಕ್ಷಣ ಎಂದು ತಿಳಿದದ್ದು 'ವೈದ್ಯನ ವಗೈರೆ'ಗಳನ್ನು ಓದಿದ ಬಳಿಕವೇ. ನನ್ನ ಸ್ನೇಹಿತರೊಬ್ಬರು, ಅವರ ಮಗಳು ಪಿಯುಸಿ ವಿದ್ಯಾರ್ಥಿನಿ ಜಾಂಡಿಸ್ ಗೆ ಕಾರಣವಾದ ಕಾಯಿಲೆಯನ್ನು ಪತ್ತೆ ಹಚ್ಚದೇ, ಇದಕ್ಕೆ ಹಳ್ಳಿ ಮದ್ದೇ ಉತ್ತಮವೆಂದು ಅದರ ಮೊರೆ ಹೊಗಿ ತನ್ನ ಮಗಳನ್ನೇ ಕಳಕೊಂಡದ್ದು ನೆನಪಾಗಿ ವೇದನೆಯಾಯಿತು. ಕೆಲ ಕಾಯಿಲೆಗಳಿಗೆ ಪಥ್ಯ ಹೇಳದಿದ್ದರೆ ರೋಗಿಗೆ ಅಪಥ್ಯವಾದೀತೆಂದು ರೋಗಿಗಳ ಮನಶಾಸ್ತ್ರವನ್ನು ಅರಿತ ಕೆಲ ವೈದ್ಯರು ಬದನೆ ಮತ್ತು ಕೋಸನ್ನು 'ಬಲಿಪಶು' ಮಾಡಿದ್ದು ನಗು ತರಿಸಿತಾದರೂ ಬದನೆ ಮತ್ತು ಕೋಸಿನ ಬಗ್ಗೆ ಕನಿಕರ ಮೂಡಿಸಿತು. ಪಥ್ಯ ಪುರಾಣ ಬರೆಯುತ್ತಾ ಲೇಖಕರು ಪಾಂಡು ರಾಜ ಪಥ್ಯ ಮುರಿದು ಜೀವ ಬಿಟ್ಟ ಕತೆಗೆ ಕೆಲವರು ಮಾದ್ರಿಯನ್ನು, ಇನ್ನು ಕೆಲವರು ಪಾಂಡುವನ್ನು ಹೊಣೆಗಾರ ಮಾಡಿದ್ದು, ಇಂದಿನ ಕಾಲದಲ್ಲಿ ನಮ್ಮ ಸುತ್ತ ಮುತ್ತ ಘಟಿಸುವ ಹಲವು ಘಟನೆಗಳ ಮೇಲೆ ಅವಲಂಬಿತವಾಗಿರದೆ ಅವುಗಳನ್ನು ಸ್ವೀಕರಿಸುವ ಜನರ ಮನಸ್ಥಿತಿಯ ಮೇಲೆ ಅವಲಂಬಿತವಾಗಿದೆಯೆನ್ನುವುದನ್ನು ಲೇಖಕರು ಪರೋಕ್ಷವಾಗಿ ತಿಳಿಸುತ್ತಾರೆ. 'ಕೊಲೆಸ್ಟರಾಲ್ ಗೆ ತೆಂಗಿನ ಎಣ್ಣೆ ಒಳ್ಳೆಯದೋ, ಸೂರ್ಯಕಾಂತಿ ಎಣ್ಣೆ ಒಳ್ಳೆಯದೋ' ಎಂದು ಕೇಳುವುದರಲ್ಲೂ, 'ಮದುವೆಯಾಗಲು ಉದ್ದ ಜಡೆಯವಳು ಒಳ್ಳೆಯದೋ?, ಮೋಟು ಜಡೆಯವಳು ಒಳ್ಳೆಯದೋ?' ಎಂದು ಕೇಳುವುದರಲ್ಲಿ ಲೇಖಕರು ವ್ಯತ್ಯಾಸ ಕಾಣರು. ಏಕೆಂದರೆ ಲೇಖಕರ ಮೂಲಭೂತ ಪ್ರಶ್ನೆ "ಮದುವೆಯಾಗುವುದು ಒಳ್ಳೆಯದೆಂದು ಹೇಳಿದವರಾರು?" ಎಂಬುದಾಗಿದೆ! "ನೋವು ಉಂಟು ಮಾಡದೇ ಬೆಳೆವ ಗಡ್ಡೆಗಳು, ನೋವು ಉಂಟು ಮಾಡುವ ಗಡ್ಡೆಗಳಿಗಿಂತ ಹೆಚ್ಚು ಅಪಾಯಕಾರಿ" ಎಂದು ಲೇಖಕರು ಹೇಳಿರುವುದರಲ್ಲಿ ತುಂಬಾ ಅರ್ಥವಿದೆ. ನೋವನ್ನು ಯಾರೂ ಇಷ್ಟ ಪಡಲಾರರು. ಆದರೆ ನೋವು ಒಂದು ವರವೆಂದು ಲೇಖಕರು ಮನದಟ್ಟು ಮಾಡುತ್ತಾರೆ. ಅಪ್ರಿಯ ಸತ್ಯಕ್ಕಿಂತ ಪ್ರಿಯವಾದ ಸುಳ್ಳುಗಳನ್ನು ಇಷ್ಟಪಟ್ಟರೆ ಕೊನೆಗೆ ಮೋಸ ಹೋಗಿ ಮುಳುಗುವುದು ತತ್ಕಾಲದ ಆನಂದದಲ್ಲಿ ತೇಲಿದವನೇ. "ಉಪ್ಪು ತಿಂದವ ನೀರು ಕುಡಿಯಲೇ ಬೇಕು" ಎಂದಾಗ ನಮ್ಮ ಮನಸ್ಸು ಥಟ್ಟನೆ ಗ್ರಹಿಸುವುವುದು, "ತಪ್ಪು ಮಾಡಿದವ ಶಿಕ್ಷೆ ಅನುಭವಿಸಲೇ ಬೇಕು" ಎಂಬ ಅರ್ಥವನ್ನು. ಉಪ್ಪು ತಿನ್ನುವುದು ಅಪರಾದವೆಂದೂ ನೀರು ಕುಡಿಯುವುದು ಅದಕ್ಕೆ ಪ್ರಾಯಶ್ಚಿತ/ ಶಿಕ್ಷೆಯೆಂದು ಲೋಕ ಏಕೆ ಪರಿಗಣಿಸಿತೆಂದು ನನಗೆ ಗೊತ್ತಿಲ್ಲ. ಲೇಖಕರು ಉಪ್ಪು ತಿಂದ ಬಳಿಕ ನಮ್ಮ ದೇಹ ಏಕೆ ನೀರನ್ನು ಬಯಸುತ್ತದೆ ಎಂಬುದಕ್ಕೆ ವೈಜ್ಞಾನಿಕ ಕಾರಣವನ್ನು ನೀಡುತ್ತಾರೆ. ಇಂತಹ ಇನ್ನೂ ಹಲವಾರು ವಿಚಾರಗಳು ಡಾ.ಎ.ಪಿ. ಭಟ್ಟರು ಬರೆದ "ವೈದ್ಯನ ವಗೈರೆಗಳು" ಕೃತಿಯ ಒಳಗಿವೆ. ಇದನ್ನು ಉದ್ದಕ್ಕೆ ಓದಿಕೊಂಡು ಹೋಗದೆ, ಅದರೊಳಗೆ ಅಡಗಿರುವ ಸೂಕ್ಷ್ಮಗಳನ್ನು ಪತ್ತೆ ಹಚ್ಚಬೇಕು. ಆ ಸೂಕ್ಷ್ಮಗಳನ್ನು ಲೇಖಕರು ಬಿಟ್ಟುಕೊಡದ ಕಾರಣ ಈ ಕೃತಿಯು ನಮ್ಮನ್ನು ಆಲೋಚನೆಗೆ ಹಚ್ಚುತ್ತದೆ. ನಮಗೆ ಆನಂದವನ್ನು ನೀಡುತ್ತದೆ. ಇದು ವೈದ್ಯಲೋಕದಲ್ಲೊಂದು ಭಿನ್ನ ಬರಹ. ಸಾಮಾನ್ಯವಾಗಿ ವೈದ್ಯ ವಿಜ್ಞಾನ, ಕಾನೂನು, ಗಣಿತ ಮುಂತಾದ ವಿಷಯಗಳು ಓದುಗನನ್ನು ಓದಿಸಿಕೊಂಡು ಹೋಗಲಾರವು. ಅವು ಬೇಗನೆ ಪುಸ್ತಕ ಮಡಚಿಸಿಡಲು ಪ್ರೇರೇಪಿಸಿ, ಓದುಗನನ್ನು ಇತರ ಕಡೆಗೆ ಎತ್ತಿ ಕೊಂಡೊಯ್ಯುವುವು. ಆದರೆ ಡಾ.ಎ.ಪಿ. ಭಟ್ಟರ "ವೈದ್ಯನ ವಗೈರೆಗಳು" ಇದಕ್ಕೆ ಅಪವಾದವಾಗಿ ಓದುಗನನ್ನು ತನ್ನಲ್ಲಿಯೇ ಉಳಿಸಿ ಕೊಳ್ಳುವುದು. ಕಾರಣ ಇದರಲ್ಲಿ ವಿಷಯ ಮಂಡನೆಗಿಂತ ಮಿಗಿಲಾದ ವಿಚಾರ ಮಂಥನವಿದೆ, ಸಾಹಿತ್ಯವಿದೆ, ಹಾಸ್ಯವಿದೆ, ಲಾಸ್ಯವಿದೆ, ಅನುಭವವಿದೆ. ಎಲ್ಲಕ್ಕಿಂತ ಮಿಗಿಲಾಗಿ ಇದರಲ್ಲಿ ಲೋಕದ ಮಿಥ್ಯೆಗಳನ್ನು ಬೆತ್ತಲುಗೊಳಿಸಿ ಸತ್ಯದ ಮಾನವನ್ನು ಕಾಪಾಡಲಾಗಿದೆ. ಡಾಕ್ಟರ್ ರಿಂದ ಇನ್ನಷ್ಟು ಕೃತಿಗಳು ಪ್ರಕಟಗೊಂಡು ಓದುಗರಿಗೆ ಲಭ್ಯವಾಗಲೆಂದು ಹಾರೈಸುತ್ತೇನೆ. - ಕೆ. ಭಾಸ್ಕರ ಕೋಡಿಂಬಾಳ.
©2024 Book Brahma Private Limited.