‘ಗಣೇಶನ ಪೂಜೆಯ 21 ಪತ್ರಿಗಳು ಮತ್ತು ಆರೋಗ್ಯ’ ವಸಂತ ಪ್ರಕಾಶನದ ಆರೋಗ್ಯ ಚಿಂತನ ಮಾಲಿಕೆಯಲ್ಲಿ ಪ್ರಕಟಿತ ಕೃತಿ. ಲೇಖಕಿ ಡಾ. ವಸುಂಧರಾ ಭೂಪತಿ ಸಂಪಾದಕರು. ಗಣೇಶನ ಪೂಜೆಯಿಲ್ಲದ ಯಾವ ಶುಭಕಾರ್ಯವೂ ಇಲ್ಲ. ಯಾವುದೇ ಕೆಲಸವಿದ್ದರೂ ಗಣೇಶನನ್ನು ಪೂಜಿಸಿಯೇ ಮುಂದಿನ ಕಾರ್ಯಕ್ಕೆ ಅನುವಾಗುವುದು ನಮ್ಮ ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿದೆ ಎನ್ನುತ್ತಾರೆ ಲೇಖಕಿ ವಸುಂಧರಾ ಭೂಪತಿ. ಸಾಮಾನ್ಯವಾಗಿ ಬಿಲ್ವಪತ್ರೆ, ಗರಿಕೆ, ಎಕ್ಕ, ಉತ್ತರಾಣಿ, ತುಳಸಿಪತ್ರೆಗಳಿಂದ ಅರ್ಚಿಸುವ ವಿಷಯ ಗೊತ್ತಿದೆಯಾದರೂ ಆ 21 ಪತ್ರೆಗಳು ಯಾವುವು, ಅವುಗಳಲ್ಲಿ ವಿಶೇಷತೆಗಳು ಮಾತ್ರವಲ್ಲದೆ ಮುಖ್ಯವಾಗಿ ಅವುಗಳಲ್ಲಿ ಅಡಗಿರುವ ಔಷಧೀಯ ಗುಣಗಳ ಬಗ್ಗೆ ಬಹುತೇಕರಿಗೆ ಅರಿವಿರಲಾರದು. ಗಣೇಶನ ಪೂಜೆಯ 21 ಪತ್ರೆಗಳಲ್ಲಿ ಒಂದಕ್ಕಿಂತ ಒಂದು ವಿಶಿಷ್ಟ ಔಷಧೀಯ ಗುಣಗಳನ್ನು ಹೊಂದಿದ್ದು, ನಮ್ಮ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ. ಆಶ್ಚರ್ಯವೆಂದರೆ, ಈ 21 ಪತ್ರೆಗಳಲ್ಲಿ ಹುಲ್ಲು, ಚಿಕ್ಕಗಿಡಗಳು, ಬೃಹತ್ ಮರಗಳು, ಸೊಪ್ಪುಗಳು, ಹೂವುಗಳು, ಮುಳ್ಳುಗಳಿಂದಾವೃತ್ತವಾದ ಗಿಡಮೂಲಿಕೆಗಳನ್ನು ಒಳಗೊಂಡಿದೆ. ಒಟ್ಟಿನಲ್ಲಿ, ಎಲ್ಲವೂ ದೇವರಿಗೆ ಅಂದರೇ ಗಣೇಶನಿಗೆ ಪ್ರಿಯವಾದವುಗಳು. ಗಣೇಶನಿಗೆ ಪ್ರಿಯವಾದವುಗಳು ನಮಗೂ ಪ್ರಿಯವಾದವುಗಳಾಗುತ್ತವೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಕಾಯಿಲೆ ಬಾರದಂತೆ ತಡೆಗಟ್ಟಲು, ಕಾಯಿಲೆ ಬಂದನಂತರ ಪರಿಹರಿಸಿಕೊಳ್ಳಲು, ಈ 21 ಪತ್ರೆಗಳು ಸಹಾಯಕವಾಗುತ್ತವೆ. ಇದನ್ನು ತಿಳಿಯಪಡಿಸುವುದೇ ಈ ಪುಸ್ತಕದ ಉದ್ದೇಶ ಎನ್ನುತ್ತಾರೆ ಲೇಖಕಿ ವಸುಂಧರಾ ಭೂಪತಿ.
©2024 Book Brahma Private Limited.