ಡಾ.ವಸುಂಧರಾ ಭೂಪತಿ ಅವರ ಕೃತಿ ‘ಟೀನೇಜ್ ತಲ್ಲಣ’. ಹದಿಹರೆಯದ ಮಕ್ಕಳ ಜೊತೆ ಮಾತನಾಡುವುದು ಹೇಗೆ ಎನ್ನುವುದೇ ಪಾಲಕರಿಗೆ ಒತ್ತಡವಾಗುತ್ತದೆ..ಇಂತಹ ಸಂದರ್ಭಗಳಲ್ಲಿ ಪಾಲಕರಿಗೆ ಹಾಗೂ ಮಕ್ಕಳಿಗೆ ಪೂರಕವಾದಂತೆ ಇರುವ ಕೃತಿಯಿದು. ಯೌವನಾವಸ್ಥೆಗೆ ದಾಟುವ ‘ಅಡೋಲಸೆಂಟ್’ ಸಮಸ್ಯೆಗಳು ಕೂಡ ಹಲವು. ಅವುಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಸೊಗಸಾಗಿ ಕಟ್ಟಿಕೊಟ್ಟ ಕೃತಿ ‘ಟೀನೇಜ್ ತಲ್ಲಣ’.ದೈಹಿಕ ಬೆಳವಣಿಗೆ, ಹದಿಹರೆಯದ ಹುಡುಗಿಯ ಆರೈಕೆ, ತುಸ್ರಾವದ ತೊಂದರೆ, ಮಾನಸಿಕ ಬೆಳವಣಿಗೆ, ಲೈಂಗಿಕತೆ, ಜೀವನ ಕೌಶಲದ ಕುರಿತು ಈ ಕೃತಿ ಮಾತನಾಡುತ್ತದೆ. ಸೌಂದರ್ಯ ಕಾಪಾಡಿಕೊಳ್ಳುವ ಅಮೂಲ್ಯ ಸಲಹೆಗಳು ಇಲ್ಲಿವೆ. ತ್ವಚೆ, ಕೇಶ, ದಂತ, ಕಣ್ಣಿನ ಸೌಂದರ್ಯವನ್ನು ಹೇಗೆ ವೃದ್ಧಿಸಿಕೊಳ್ಳಬೇಕು ಎಂಬ ವಿಷಯವಾಗಿ ಕಿವಿಮಾತುಗಳೂ ಇವೆ. ಮೊಡವೆಗಳನ್ನು ಹೇಗೆ ನಿಯಂತ್ರಿಸಬೇಕು, ಬಾಯಿ ದುರ್ಗಂಧವನ್ನು ತಡೆಗಟ್ಟುವ ದಾರಿ ಯಾವುದು ಎಂಬುದರ ಮಾಹಿತಿಯೂ ಇದೆ. ಎನ್.ಎಸ್. ಲೀಲಾ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ‘ಓಡುವ ಮನಸ್ಸಿಗೆ ಬೇಡಿ ಹಾಕಿ, ಆಯಾಯಾ ಕಾಲಕ್ಕೆ ವೈಜ್ಞಾನಿಕ ಹಿನ್ನೆಲೆ ಬಳಸಿಕೊಂಡು, ನಡೆ-ನುಡಿಗಳಲ್ಲಿ ಕಡಿವಾಣ ಹಾಕಿ ಬದುಕುವ ಮಾರ್ಗ ತೋರಿಸಿದ್ದಾರೆ. ಸುಂದರ ಸಮಾಜಕ್ಕೆ ಬುನಾದಿ ಹಾಕುವ ವೈದ್ಯೆ ಡಾ. ವಸುಂಧರಾ ಭೂಪತಿ ಅವರಿಗೆ ಅಭಿನಂದನೆಗಳು ಎಂಬುದಾಗಿ ಎನ್.ಎಸ್. ಲೀಲಾ ಮುನ್ನುಡಿಯಲ್ಲಿ ಹೇಳಿದ್ದಾರೆ
©2024 Book Brahma Private Limited.