ಲೇಖಕ ಆಸೂರಿ ಕೆ. ರಂಗರಾಜ ಅಯ್ಯಂಗಾರ್ ಅವರ ಕೃತಿ ʻಔಷಧಿ ರಹಿತ ಚಿಕಿತ್ಸಾ ಯೋಗ ಮುದ್ರೆಗಳುʼ. ಪುಸ್ತಕದ ಬಗ್ಗೆ ಲೇಖಕರು ಹೇಳುವಂತೆ, “ಚಿಕ್ಕ ವಯಸ್ಸಿನಿಂದ ದೇವಾಲಯಗಳಲ್ಲಿ, ಹಲವಾರು ಪೂಜಾ ಸಂದರ್ಭಗಳಲ್ಲಿ, ಆಚಾರ್ಯರು, ಅರ್ಚಕರುಗಳು ಹಲವಾರು ಹಸ್ತ ಮುದ್ರೆಗಳನ್ನು ಆಚರಿಸುತ್ತಿದ್ದುದನ್ನು ಕಂಡು ಕೇವಲ ಕುತೂಹಲ ಮಾತ್ರವಾಗಿತ್ತು. ನಂತರ ಈಗ ʻಯೋಗʼ ಪ್ರಪಂಚಕ್ಕೆ ಪದಾರ್ಪಣೆ ಮಾಡಿದಂದಿನಿಂದ ಕೇವಲ ಚಿನ್ಮುದ್ರಾ, ಧ್ಯಾನ ಮುದ್ರಾ, ಚಿನ್ಮಯ ಮುದ್ರಾಗಳ ಪರಿಚಯವಷ್ಟೇ ಆಗಿ ಈ ಬಗ್ಗೆ ಇನ್ನೂ ಹೆಚ್ಚು ಮಾಹಿತಿ ಸಂಗ್ರಹಿಸಲು ಪ್ರೇರಣೆಯಾಯ್ತು. ಹಲವಾರು ಹಿರಿಯರ ಸ೦ಪರ್ಕದಿಂದ ಗ್ರಂಥಗಳ ಅವಲೋಕನಗಳಿಂದ, ʻಮುದ್ರಾಲೋಕಕ್ಕೆʼ ಪ್ರವೇಶವಾಯ್ತು. ಅಮೆರಿಕದ ಪ್ರವಾಸಗಳಲ್ಲಿ ಹಲವು ಭಾರತೀಯ ವಿಜ್ಞಾನಿಗಳೊಡನೆ ವಿಚಾರ ವಿಮರ್ಶಿಸಿ ದೇಹದಲ್ಲಿರುವ ವಿದ್ಯುದಯಸ್ಕಾಂತ ಶಕ್ತಿಗಳ ಬಗ್ಗೆ ಚರ್ಚಿಸಲಾಯಿತು. ಪಂಚ ಭೌತಿಕ ವಸ್ತುಗಳಾದ ಅಗ್ನಿ, ವಾಯು, ಆಕಾಶ, ಭೂಮಿ ಮತ್ತು ಜಲ ತತ್ವಗಳು ನಮ್ಮ ಐದು ಬೆರಳುಗಳಲ್ಲಿಯೇ, ಸಂಲಗ್ನವಾಗಿ ಪ್ರವಹಿಸುವ ಬಗ್ಗೆ ತಿಳಿದು ಆಶ್ಚರ್ಯಚಕಿತನಾದೆ. ಈ ಐದು ತತ್ವಗಳನ್ನು ಸಮತೋಲನವಾಗಿ ನಿಯಮಿತ ಪ್ರಮಾಣದಲ್ಲಿದ್ದಾಗ ಮಾತ್ರ ನಮ್ಮ ಮಾನಸಿಕ, ದೈಹಿಕ, ಆಧ್ಯಾತ್ಮಿಕ ಆರೋಗ್ಯ ಸುವ್ಯವಸ್ಥಿತ. ಇವುಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅನಾಹುತ ಸಂಭವ ಇವುಗಳನ್ನರಿತು ಹಲವಾರು ಮೂಲಗಳಿಂದ ಈ ವೈಜ್ಞಾನಿಕ ತತ್ವಗಳನ್ನು ಸಂಗ್ರಹಿಸಿ ಈ ಚಿಕಿತ್ಸಾ ಯೋಗ ಮುದ್ರಗಳು ಪುಸ್ತಕದಲ್ಲಿ ಸರಳವಾಗಿ ವಿವರಿಸಲಾಗಿದೆ. ಮುದ್ರೆಗಳನ್ನು ಅರಿತು, ಅರಿಯದೆ ಆಚರಿಸಿದರೂ ಫಲ ಲಭ್ಯ. ಮುದ್ರೆಗಳು ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ಔನ್ನತ್ಯಕ್ಕೆ ಯಶಸ್ವಿ ಸಾಧನವಾಗಬಲ್ಲದೆಂಬುದೇ ಲೇಖಕನ ವಿನಮ್ರ ಅರಿಕೆ”.
©2024 Book Brahma Private Limited.