‘ವನೌಷಧಿಗಳ ಗುಣಧರ್ಮ ಮತ್ತು ವಿವಿಧ ಶಬ್ಧಕೋಶ’ ಕೃತಿಯು ತಿರುಕ ಅವರ ಬಾಳ ಬೆಳಕು ಸಾಹಿತ್ಯ ಮಾಲೆ-53ರ ಅಡಿಯಲ್ಲಿ ಪ್ರಕಟವಾದ ಮನೆಔಷಧಿಗಳನ್ನು ಒಳಗೊಂಡ ಸಂಕಲನವಾಗಿದೆ. ಇಲ್ಲಿ ನೈಸರ್ಗಿಕವಾಗಿ ಸಿಗಬಹುದಾದ, ಮನೆ ಹಿತ್ತಲಿನಲ್ಲಿರುವ ಹಲವಾರು ಮನೆ ಔಷಧಿಗಳ ಕುರಿತ ಮಾಹಿತಿಯನ್ನು ನೀಡಲಾಗಿದೆ. ಅಳಲೇಕಾಯಿ: ಇದು ಮೃದುವಿರೇಚನಕಾರಿ; ಬಾವು ಶೋಭೆಗಳನ್ನು ಹರಿಸುತ್ತದೆ. ಕಫಘ್ನವೂ ಹೌದು. ಪಿತ್ತವನ್ನು ನಿವಾರಿಸಿ, ಚರ್ಮರೋಗಗಳನ್ನು ಪರಿಹರಿಸಿ ಅಗ್ನಿದೀಪವನ್ನುಂಟುಮಾಡುತ್ತದೆ. ರಸಾದಿ ಧಾತುಗಳನ್ನು ವೃದ್ಧಿಪಡಿಸುವ ಶಕ್ತಿ ಇದಕ್ಕಿರುವುದರಿಂದ ವನೌಷಧಿಗಳಲ್ಲಿ ಇದಕ್ಕೆ ಶ್ರೇಷ್ಠ ಸ್ಥಾನವಿದೆ. ಇದರಲ್ಲಿ ಬಾಲಹರೀತಕೀ ಎಂಬ ಇನ್ನೊಂದು ಜಾತಿಯೂ ಇದೆ. ಇದರ ಹೆಚ್ಚಿನ ಗುಣಧರ್ಮಗಳು ಅದೇ ಆದರೂ ಮೂಲವ್ಯಾಧಿ: ಗುಲ್ಬಗಳೇ ಮೊದಲಾದ ಕೆಲವೊಂದು ವ್ಯಾಧಿಗಳ ಮೇಲೆ ಇದು ಹೆಚ್ಚಿನ ಪರಿಣಾಮವನ್ನುಂಟುಮಾಡುತ್ತದೆ. ಇದನ್ನು ಚೂರ್ಣ ರೂಪವಾಗಿಯೂ, ಕಷಾಯರೂಪವಾಗಿಯೂ ಉಪಯೋಗಿಸುವ ರೂಢಿಯಿದೆ. ಚೂರ್ಣವನ್ನು ಹೊತ್ತಿಗೆ ಕಾಲುತೊಲೆಯಿಂದ ಅರ್ಧತೊಲೆಯವರೆಗೆ ಕೊಡುವುದು ಸಾಮಾನ್ಯ ನಿಯಮ; ಅನುಪಾನಕ್ಕೆ ಜೇನು ಅಥವಾ ಬಿಸಿನೀರು ಕಷಾಯವಾದರೆ 2 ರಿಂದ 4 ಚಮಚೆಯವರೆಗೆ ಕೊಡಬೇಕು. ಅತಿಬಜೆ: ಇದು ದೀಪನಕಾರಿ, ಜ್ವರಘ್ನ ಮತ್ತು ಗ್ರಾಹಿ: ಅಜೀರ್ಣವನ್ನು ಪರಿಹರಿಸಿ ಹಸಿವೆಯನ್ನು ಹೆಚ್ಚಿಸುತ್ತದೆ. ಕಟುಪೌಷ್ಟಿಕವಾಗಿರುವುದರಿಂದ ಅತಿಸಾರ, ಸಂಗ್ರಹಣೆಗಳನ್ನು ಗುಣಪಡಿಸುತ್ತದೆ. ಚಿಕ್ಕಮಕ್ಕಳ ಮತ್ತು ಬಾಣಂತಿಯರ ಭೇದಿಗಳಲ್ಲಿ ಬಹು ಒಳ್ಳೆಯ ಪರಿಣಾಮವನ್ನುಂಟುಮಾಡುತ್ತದೆ. ಹೀಗೆ ಹಲವಾರು ಬಗೆಯ ಔಷಧಿಯ ಮಾಹಿತಿಯನ್ನು ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.