ಪಂಡಿತ ತಾರಾನಾಥರು ಬಹುಮುಖ ಪ್ರತಿಭೆ. ಶುಶ್ರೂಷೆಯಿಂದ ಸಂಗೀತದವರೆಗೆ ಅವರು ಕೆಲಸ ಮಾಡದ ಕ್ಷೇತ್ರಗಳೇ ಇರಲಿಲ್ಲ. ತಾರಾನಾಥರೊಳಗೆ ಒಬ್ಬ ಸಂತನಿದ್ದ, ಸಾಹಿತಿಯೂ ಇದ್ದ. ತತ್ವಜ್ಞಾನದ ಜೊತೆಗೆ ವಿಜ್ಞಾನವೂ ಅವರೊಳಗೆ ಮೇಳೈಸಿತ್ತು. ಎಂ.ಧ್ರುವನಾರಾಯಣ ಅವರು ಸಂಗ್ರಹಿಸಿರುವ ’ಸುಲಭ ಚಿಕಿತ್ಸೆ’ ಕೃತಿ ತಾರಾನಾಥರ ’ಹಕೀಮತನ’ವನ್ನು ಪರಿಚಯಿಸುತ್ತದೆ.
ಈ ಕೃತಿಯು ವಿಷಯ ಪ್ರವೇಶ, ಪಥ್ಯಾ ಪಥ್ಯ ವಿಷಯಗಳು, ವಯೋ-ಮಾನ-ಪ್ರಮಾಣ, ಅಜೀರ್ಣ, ಅತಿಸಾರ, ಅತಿಸಾರ(ಮಕ್ಕಳದು), ಅಪಸ್ಮಾರ, ಆಮ್ಲಪಿತ್ತ, ಆರೋಚಕ, ಆರ್ದಿತ, ಆರ್ಧಾವ ಭೇದಕ, ಅರ್ಧಾಂಗವಾತ, ಆಶಕ್ತತೆ-ಧಾತು ಕ್ಷಯಜನ್ಯ, ಅಷ್ಠೀಲಾ, ಅಂತ್ರವೃದ್ಧಿ, ಆಮಾಂಶ, ಆಕ್ಷೇಪಕವಾಯು, ಉದರರೋಗ, ಉನ್ಮಾದ, ಉಪದಂಶ, ಉಪಕ್ಷತ, ಊರುಸ್ತಂಭ, ಕಟಿವಾತ, ಕರ್ಣಶೂಲ, ಕಾಮಿಲಾ, ಕುಷ್ಠ, ಕೆಮ್ಮು, ಕ್ಷಯ, ಗರ್ಭಪಾತ, ಗಂಡಮಾಲೆ, ಗುದಭ್ರಂಶ, ಗುಲ್ಮರೋಗ, ಛರ್ದಿ, ಜ್ವರ, ಕ್ವಾಥಗಳು, ಕೆಲವು ಔಷಧಿಯ ಸೇವನೆಗೆ ಸೂಚನೆಗಳು, ಬಸ್ತಿ(ಎನೀಮಾ) ಹಲವು ಪ್ರಸಿದ್ಧ ರಸೌಷದಿಗಳು, ರೋಗಗಳೂ ಹಲಕೆಲವು ಯೋಗ್ಯ ರಸೌಧಿಗಳು, ಆರೋಗ್ಯ ಮತ್ತು ಸೌಂದರ್ಯ, ನೈಸರ್ಗಿಕ ಚಿಕಿತ್ಸೆಯನ್ನು ಒಳಗೊಂಡಿದೆ.
ಇಂದು ವೈದ್ಯಕೀಯ ರಂಗದಲ್ಲಿ Intergrated medicine ಎಂದೇ ಕರೆಯಲಾಗುವ ಪದ್ಧತಿಯನ್ನು ತಾರಾನಾಥರು ಸುಮಾರು ನೂರು ವರ್ಷಗಳ ಹಿಂದೆಯೇ ಜಾರಿಗೆ ತಂದಿದ್ದರು. ಎಲ್ಲರಿಗೂ ತಿಳಿದಂತೆ ಅವರು ಓದಿದ್ದು ಹೈದರಾಬಾದಿನ ವೈದ್ಯಕೀಯ ಶಾಲೆಯಲ್ಲಿ. ಆದರೆ ಅವರು ಹೆಸರು ಗಳಿಸಿದ್ದು ಆಯುರ್ವೇದದಲ್ಲಿ, ಅಂದಿನ ತಲೆಮಾರಿನ ಜನ ಅವರನ್ನು 'ಕರ್ನಾಟಕದ ಧನ್ವಂತರಿ' ಎಂದು ಕರೆಯುತ್ತಿದ್ದರು. ಇದು ಅವರಿಗೆ ಆಯುರ್ವೇದದಲ್ಲಿ ಇದ್ದ ಪ್ರೌಢಿಮೆಯನ್ನು ಸೂಚಿಸುತ್ತದೆ. ತಾರಾನಾಥರು ಹೇಳುವಂತೆ ಅವರು ಆಯುರ್ವೇದ ವಿದ್ಯೆಯನ್ನು ಹೈದರಾಬಾದಿನ ಹಕೀಮ್ ಹರಿಗೋವಿಂದಜೀ ಕವಿರಾಜರಿಂದ ಪಡೆದಿದ್ದರು. ತಾರಾನಾಥರನ್ನು ಆಯುರ್ವೇದ ವಿಶಾರದ ಭೀಷ್ಮಾಚಾರ್ಯರೆಂದೇ ಕರೆಯುತ್ತಿದ್ದರು. 1934ರಲ್ಲಿ ರಾಯಚೂರಿನಲ್ಲಿ ನಡೆದ ಪ್ರಥಮ ಅಖಿಲ ಕರ್ನಾಟಕ ಆಯುರ್ವೇದ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅದರಂತೆಯೇ ಪುಣೆಯಲ್ಲಿ ನಡೆದ ಬೊಂಬಾಯಿ ಪ್ರಾಂತೀಯ ಸಮ್ಮೇಳನದ (1938) ಅಧ್ಯಕ್ಷರಾಗಿದ್ದರು. ಅದೇ ವರ್ಷ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಆನುವಂಶಿಕ ವೈದ್ಯರ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ಹಂತದಲ್ಲಿ ಗಮನಿಸಲೇಬೇಕಾದ ಪ್ರಮುಖ ಅಂಶವೆಂದರೆ ತಾರಾನಾಥರ ವಿಶಿಷ್ಟ ಚಿಕಿತ್ಸಾಕ್ರಮ. ಸೋಜಿಗದ ಸಂಗತಿ ಎಂದರೆ ತಾರಾನಾಥರು ಮಂತ್ರ, ತಂತ್ರ, ಯೋಗ ವಿದ್ಯೆಯನ್ನು ತಮ್ಮ ಚಿಕಿತ್ಸಾಪದ್ದತಿಯಲ್ಲಿ ಅಳವಡಿಸಿಕೊಂಡಿದ್ದರು. ಅದರಿಂದಾಗಿ ಅವರ ಚಿಕಿತ್ಸಾ ಪದ್ಧತಿಯು ಭಾರತದಾದ್ಯಂತ ಪ್ರಸಿದ್ದಿ ಪಡೆದು ವಿದೇಶಿಯರನ್ನು ಆಕರ್ಷಿಸಿತು.
©2024 Book Brahma Private Limited.