ಸಿರಿಧಾನ್ಯಗಳ ಕುರಿತಾದಂತಹ ಮಾಹಿತಿ ಎಲ್ಲರಿಗೂ ತಿಳಿದಿಲ್ಲ. ಸಿರಿಧಾನ್ಯಗಳಿಂದ ನಮಗೆ ಎಷ್ಟು ಉಪಯೋಗ ಇದೆ ಎನ್ನುವುದರ ಕುರಿತು ಈವರೆಗೆ ಹಲವು ಪುಸ್ತಕಗಳು ಬರೆಯಲ್ಪಟ್ಟಿವೆ. ಸಿರಿಧಾನ್ಯಗಳನ್ನು ಉಪಯೋಗಿಸಿ ಅವುಗಳಿಂದ ಕಂಡುಕೊಂಡ ಉಪಯೋಗಗಳ ಕುರಿತು ಬರೆದಂತಹ ಪುಸ್ತಕಗಳು ಕೂಡ ಇವೆ. ಲೀಲಾವತಿ ಅವರು ಬರೆದ ಪುಸ್ತಕ ಈ ಸಂಧರ್ಭದಲ್ಲಿ ಏಕೆ ಮುಖ್ಯವಾಗುತ್ತೆ ಎಂದರೆ, ಅವರು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ವಿವಿಧ ರಂಗಗಳಲ್ಲಿ ಗುರುತಿಸಿಕೊಂಡ ಸಿರಿಧಾನ್ಯ ತಜ್ಞರು. ಹಿಂದಿನ ಎಲ್ಲಾ ಪುಸ್ತಕಗಳಲ್ಲಿರುವ ಮಾಹಿತಿಗಳಿಗೆ ಬೆನ್ನೆಲುಬಾಗಿರುವಂತೆ ಇವೆ ಈ ಪುಸ್ತಕದಲ್ಲಿನ ಮಾಹಿತಿಗಳು. ಸಿರಿಧಾನ್ಯಗಳಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮತ್ತು ಅದರ ಸೇವನೆಯಿಂದ ಮನುಷ್ಯರಿಗೆ ಬೇಗನೆ ಹಸಿವಾಗುವುದಿಲ್ಲ ಆದರೆ, ದೇಹಕ್ಕೆ ಸಮರ್ಪಕವಾದ ಶಕ್ತಿಯನ್ನು ಈ ಸಿರಿಧಾನ್ಯಗಳು ನೀಡುತ್ತವೆ. ರೋಗಗಳನ್ನು ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ದೂರವಿಡಲು ಈ ಪುಸ್ತಕದಲ್ಲಿನ ಉಪಯುಕ್ತ ಮಾಹಿತಿಗಳು ಬಹಳಷ್ಟು ಸಹಕಾರಿಯಾಗಿವೆ. ಈ ಪುಸ್ತಕದಲ್ಲಿ ಕೇವಲ ಸಿರಿಧಾನ್ಯಗಳ ಮಾಹಿತಿ ಮಾತ್ರವಲ್ಲದೇ, ಅವುಗಳ ಬಗೆ ಬಗೆಯ ಅಡುಗೆಯ ವಿಧಾನಗಳ ಕುರಿತಾಗಿ ಹಲವು ಉಪಯುಕ್ತ ಬರಹಗಳಿವೆ. ರುಚಿಯ ಜೊತೆ ಜೊತೆಗೆ ದೇಹದ ಆರೋಗ್ಯವನ್ನು ಕಾಪಾಡಲು ಕೂಡ ಈ ಪುಸ್ತಕ ಸಾಕಷ್ಟು ಮಾಹಿತಿ ನೀಡುತ್ತದೆ.
©2024 Book Brahma Private Limited.