ನಿತ್ಯ ಯೋಗ ವಿರೂಪಾಕ್ಷ ಬೆಳವಾಡಿ ಅವರ ಕೃತಿಯಾಗಿದೆ. ಬದುಕು ಹೀಗೆ ನಿರಂತರ ಯೋಗವಾಗಬೇಕು. ಉನ್ನತ ಆದರ್ಶಗಳ ಕಡೆ ದಾಪುಗಾಲಿಡುವ ಸ್ವಸ್ಥ ಸಮಾಜದ ನಿರ್ಮಾಣವಾಗಬೇಕು. ನಿರಂತರವಾಗಿ ಆಂತರಿಕ ಸಂಘರ್ಷ, ಗೊಂದಲ, ಅಪನಂಬಿಕೆಗಳಿಂದ ಬೇಯುತ್ತಿರುವ ಸಮಾಜಕ್ಕೆ ಮಾರ್ಗದರ್ಶನ ಮಾಡಬಲ್ಲ ಯೋಗಿಗಳು ಹಿಂದೆಂದಿಗಿಂತಲೂ ಹೆಚ್ಚು ಈಗ ಬೇಕಾಗಿದ್ದಾರೆ. ಹೃದಯ ಅರಳಿಸಿಕೊಂಡು ಕೈವಲ್ಯದತ್ತ ಹೆಜ್ಜೆ ಇಡುವ ಪೀಳಿಗೆ ಈಗ ಜಗತ್ತಿನ ಅವಶ್ಯಕತೆ. ಹಾಗೆ ಸುಮ್ಮನೆ ಸುತ್ತಲೂ ಕಣ್ಣು ಹಾಯಿಸಿದರೆ ಕಪಾಟಿನ ತುಂಬಾ ದುಡ್ಡು ಕೂಡಿಟ್ಟೂ ನೆಮ್ಮದಿ ಕಳಕೊಂಡು ಬದುಕುತ್ತಿರುವ ಅನೇಕರು ಕಾಣಸಿಗುತ್ತಾರೆ. ಯೌವ್ವನದಲ್ಲಿ ಹಣದ ಹಿಂದೆ ಬಿದ್ದು ಮಧ್ಯವಯಸ್ಸು ದಾಟಿದೊಡನೆ ಅದೇ ಹಣವನ್ನು ಪಣಕ್ಕೊಡ್ಡಿ ಆರೋಗ್ಯದ ಹಿಂದೆ ಓಡುವ ಜನರಂತೂ ಸರ್ವೆಸಾಮಾನ್ಯ. ಇವರೆಲ್ಲರಿಗೂ ಸೂಕ್ತ ಸಂದರ್ಭದಲ್ಲಿ ಸೂಕ್ತ ದಾರಿ ತೋರುವುದು ಯೋಗವೇ. ಅದಕ್ಕೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಮುಲಾಜಿಲ್ಲದೇ ಜಾಗತಿಕ ಬೆಂಬಲ ದೊರಕಿದ್ದು, ಯೋಗ ಜಾಗತಿಕ ಸಮಸ್ಯೆಗಳಿಗೆ ಉತ್ತರ ಕೊಡುವ ಕಾಲ ಈಗ ಬಲವಾಗಿದೆ. ಭಾರತದ ವಿಶ್ವಗುರುತ್ವದ ಪಥಕ್ಕೆ ಯೋಗ ಮಹತ್ವದ ಹೆಜ್ಜೆ ಎಂದು ಚಕ್ರವರ್ತಿ ಸೂಲಿಬೆಲೆ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.