ಗುರುಮಾತೆ ಲೂಸಿ ಸಾಲ್ಡಾನಾ ಅವರ ಸಂಗ್ರಹಿತ ಕೃತಿ-ಮನೆ ಮದ್ದು. ಲೇಖಕ ವೈ.ಬಿ. ಕಡಕೋಳ ಅವರು ತಮ್ಮ ಗುರು ಮಾತೆ ಲೂಸಿ ಸಾಲ್ಡಾನಾ ಅವರ ವ್ಯಕ್ತಿತ್ವವನ್ನು ದರ್ಶಿಸುವ ಕೃತಿ ‘ಕತೆಯಲ್ಲ ಜೀವನ’ ಬರೆದ ನಂತರ ಅದನ್ನು ‘ಬದುಕು ಬಂಡಿ’ ಶೀರ್ಷಿಕೆಯಡಿ ಕಿರು ಚಲನಚಿತ್ರವನ್ನಾಗಿಯೂ ಮಾಡಿದ್ದು ಅವರ ಗುರು ನಿಷ್ಠೆಗೆ ಪ್ರತೀಕ. ತದನಂತರ, ಇದೇ ಗುರುವಿನ ಮಾನವೀಯ ಕಳಕಳಿಗೆ ದ್ಯೋತಕವಾಗಿರುವಂತೆ ತಮ್ಮ ಗುರುಗಳು ಸಂಗ್ರಹಿಸಿದ ಸಾಂಪ್ರದಾಯಿಕ ಜ್ಞಾನವನ್ನು ಒಂದೆಡೆ ಕಟ್ಟಿಕೊಟ್ಟ ಕೀರ್ತಿಯ ರೂಪವೇ ಈ ಕೃತಿ-ಮನೆಮದ್ದು. ಮನೆಮದ್ದುಗಳ ಮೂಲಕ ಆರೋಗ್ಯವನ್ನು ಸ್ವಸ್ಥವಾಗಿರಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದ್ದು, ಮಾನವೀಯ ಪ್ರೀತಿಗೆ ಕನ್ನಡಿ ಹಿಡಿಯುತ್ತದೆ.
ಸಾಹಿತಿ ಆರ್.ಆರ್. ಸದಲಗಿ ಅವರು ಕೃತಿಗೆ ಮುನ್ನುಡಿ ಬರೆದು ‘ ಕಫ, ಕೆಮ್ಮು, ಚರ್ಮ, ಮುಖ, ಅಜೀರ್ಣ, ಹೊಟ್ಟೆಯುರಿ, ವಾಂತಿ, ಭೇದಿ, ಮಧುಮೇಹ, ಆಯಾಸ, ಬಾಯಿಹುಣ್ಣು, ಗಜಕರ್ಣ ಹೀಗೆ ಪ್ರತಿ ರೋಗಕ್ಕೂ ಮನೆಮದ್ದುಗಳು ಯಾವವು ಎಂಬುದರ ಸಮಗ್ರ ಮಾಹಿತಿಯನ್ನು ಗುರುಮಾತೆ ಲೂಸಿ ಸಾಲ್ಡಾನಾ ಅವರು ಅಭಿಪ್ರಾಯಪಟ್ಟಂತೆ ನಿರೂಪಿಸಿದ್ದಾರೆ. ನಿತ್ಯ ಬದುಕಿನಲ್ಲಿ ಇತರರ ಸಂತೋ಼ಕ್ಕಾಗಿ ಬದುಕುವುದು ಗುರುಮಾತೆಯ ವ್ಯಕ್ತಿತ್ವದ ದರ್ಶನವೂ ಇಲ್ಲಿದೆ. ಅವರ ಕುರಿತು ಎರಡು ಕವನಗಳನ್ನು ಪ್ರಕಟಿಸಿದ್ದಾರೆ. ಅವರ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುವ ಒಂದು ಕವನ ಹಾಗೂ ಮನೆಮದ್ದುಗಳ ಮಹತ್ವ ತಿಳಿಸುವ ಮತ್ತೊಂದು ಕವನದ ವಸ್ತು. ಲೇಖಕರ ಸ್ನೇಹಿತ ಲಕ್ಕಪ್ಪ ಲಕ್ಕಪ್ಪನವರ ಅವರು ಲೂಸಿ ಸಾಲ್ಡಾನಾ ಕುರಿತು ಬರೆದ ಲೇಖನವೂ ಇದೆ. ಶಾಲಾಭಿವೃದ್ಧಿಗೋಸ್ಕರ ಗುರುಮಾತೆಯವರು ನಿವೃತ್ತಿ ಜೀವನದ ಹಣವನ್ನು ಇಡುಗಂಟಾಗಿ ಇಟ್ಟು ಸೇವೆಗೆ ಬದ್ಧರಾದ ಬದುಕು ಹಾಗೂ ನಿವೃತ್ತರಾದ ಮೇಲೂ ಅವರು ಮಕ್ಕಳಿಗೆ ಪಾಠ ಮಾಡುವ ಅನುಕರಣೀಯ ನಡೆಯ ವ್ಯಕ್ತಿತ್ವದ ಚಿತ್ರಣವೂ ಕೃತಿಯಲ್ಲಿ ಅನಾವರಣಗೊಂಡಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.