ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೋಷಕರ ಪಾತ್ರ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಮಕ್ಕಳ ಬೆಳವಣಿಗೆಗೆ ಮನೆ ವಾತಾವರಣ, ಪೋಷಕರ ಮನಸ್ಥಿತಿ ಹೇಗಿರಬೇಕು ಎಂಬುದರ ಕುರಿತು ಲೇಖಕರಾದ ಜಿ.ಎಸ್. ಜಯದೇವ ಅವರು ಮಕ್ಕಳ ಬೆಳವಣಿಗೆ ಮತ್ತು ನಾವು ಕೃತಿಯಲ್ಲಿ ವಿವರಿಸಿದ್ದಾರೆ.
ಮನೆಯಲ್ಲಿ ತಂದೆತಾಯಂದಿರು ಮತ್ತು ಹಿರಿಯರು, ಶಾಲೆಯಲ್ಲಿ ಗುರುಗಳು ಮಕ್ಕಳ ಓದು, ಬರೆಹ, ಆಟಪಾಠ, ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಅವರ ಗುಣದೋಷಗಳನ್ನು ತಿದ್ದಿ ಅವರು ಸತ್ಪ್ರಜೆಗಳಾಗಿ ಬೆಳೆಯಲು ಸಹಾಯಕವಾಗುವುದು ಒಂದು ವಿಧ. ಆದರೆ, ಸಮಾಜದ ಅತ್ಯಂತ ಕೆಳಸ್ತರದಿಂದ, ಬಡತನದ, ಅಕ್ಷರದ ಪರಿಚಯವಿಲ್ಲದ ಹಿನ್ನೆಲೆಯಿಂದ ಬಂದಿರುವ, ಬೇರೆಬೇರೆ ಸ್ವಭಾವ, ನಡವಳಿಕೆಗಳನ್ನು ಹೊಂದಿರುವ, ಸುಧಾರಿಸಿಕೊಳ್ಳುವ ಅವಕಾಶದಿಂದ ವಂಚಿತರಾಗಿದ್ದ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ ಅವರ ವ್ಯಕ್ತಿತ್ವವನ್ನು ತಿದ್ದಿ, ತೀಡಿ ಅವರು ಸತ್ಪ್ರಜೆಗಳಾಗಿ ರೂಪುಗೊಳ್ಳಲು ಸಹಾಯಕವಾಗುವುದು, ಹಾಗೆಯೇ ಕಳೆದುಹೋಗಬಹುದಾಗಿದ್ದ ಅವರ ಬಾಲ್ಯದ ಸಂತೋಷವನ್ನು ಅವರಿಗೆ ದೊರಕಿಸಿ ಕೊಡುವುದು ನಿಜವಾಗಿಯೂ ಶ್ರಮದಾಯಕವಾದ ಮತ್ತೊಂದು ವಿಧ. ಜಿ.ಎಸ್.ಜಯದೇವ ಅವರು ತಮ್ಮ ದೀನಬಂಧು ಆಶ್ರಮ ಶಾಲೆಯ ಮೂಲಕ ಇಂಥ ಕಷ್ಟಸಾಧ್ಯವಾದ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಸ್ವತಃ ಶಿಕ್ಷಕರಾಗಿ ಅನುಭವವಿರುವ ಇವರು ಮಕ್ಕಳ ಬೆಳವಣಿಗೆಗೆ ನಾವು ಏನು ಮಾಡಬಹುದು ಎಂಬುದನ್ನು, ತಮ್ಮ ಅನುಭವಕ್ಕೆ ಬಂದ ಹಲವು ಚಿತ್ರಣಗಳ ಮೂಲಕ ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.