ಕೊರೊನಾ ವೈರಾಣು ಮಹಾಮಾರಿ ಸದ್ದು ಮಾಡಿದ್ದು 2019ರ ವರ್ಷಾಂತ್ಯದಲ್ಲಿ. ಆದರೆ ಅದರ ಅಟ್ಟಹಾಸಕ್ಕೆ ಮಾನವ ಸಮೂಹ ಇಂದಿಗೂ ತತ್ತರಿಸುತ್ತಿದೆ. ಈ ಬಗ್ಗೆ ಅನೇಕ ಗೊಂದಲಗಳು, ಪರಿಹಾರದ ಮಾರ್ಗ ಮತ್ತು ಕಾಡುವ ಸಂಶಯಗಳಿಗೆ ಈ ಕೃತಿ ಸೂಕ್ತ ಮಾಹಿತಿ ನೀಡುತ್ತದೆ. ಕೊರೊನಾ ವೈರಸ್ ಬಗ್ಗೆ ಕನ್ನಡ ಮೊದಲ ಕೃತಿ ‘ಮಹಾಮಾರಿ ಕೊರೊನಾ’. ಕೊರೊನ ಹರಡುವಿಕೆ, ಅದರ ಹುಟ್ಟು ಹಾಗೂ ತಡೆಗಟ್ಟುವ ಬಗೆ, ಮುನ್ನೆಚ್ಚರಿಕೆ ಕ್ರಮ, ಆರ್ಯುವೇದ ಚಿಕಿತ್ಸಾ ವಿಧಾನ ಮುಂತಾದ ವಿವರಗಳನ್ನು ಈ ಕೃತಿ ನೀಡುತ್ತದೆ.
ಕೊರೊನಾ ತಡೆಗೆ ಆಯುರ್ವೇದದ ಸಾಥ್
ಟಿವಿ, ಪತ್ರಿಕೆ, ಸೋಷಿಯಲ್ ಮೀಡಿಯಾ ತುಂಬೆಲ್ಲ ಈಗ ಒಂದೇ ಮಾತು ಕೊರೊನಾ. ಸೋಂಕಿತರ ಸಂಖ್ಯೆ ಏರುತ್ತಿದೆ, ಸಾವಿನ ವರದಿಗಳೂ ಬರುತ್ತಿವೆ. ಇದೆಲ್ಲಕ್ಕಿಂತಲೂ ಕೊರೊನಾ ಬಗೆಗಿನ ಭಯದ ಮೀಟರ್ ಜಂಪ್ ಆಗುತ್ತಿದೆ. 120 ಕೋಟಿಗೂ ಅಕ್ಷ ಜನಸಂಖ್ಯೆಯ ಭಾರತದಂಥ ದೇಶದಲ್ಲಿ ಸೋಂಕಿತ ಸಂಖ್ಯೆ ಎರಡಂಕಿ ದಾಟಿಲ್ಲ ಹೀಗಾಗಿ, ಭಯಕ್ಕಿಂತಲೂ ಅರಿವು ಮುಖ್ಯ. ಕೊರೊನಾದಂಥ ಪಿಡುಗು ನಮ್ಮ ದೇಶಕ್ಕೆ ಹೊಸತೇನಲ್ಲ. ಇವುಗಳನ್ನು ನಿಭಾಯಿಸಲು ಆಯುರ್ವೇದ ಏನನ್ನು ಹೇಳುತ್ತದೆ ಎನ್ನುವ ಕುತೂಹಲಕ್ಕೆ ಹಿರಿಯ ಆಯುರ್ವೇದ ಮಹಾಮಾರಿ ವೈದ್ಯರಾದ ಡಾ.ಸತ್ಯನಾರಾಯಣ ಭಟ್ ಪಿ. ಅವರ 'ಮಹಾಮಾರಿ ಕೊರೊನಾ' ಎನ್ನುವ ಪುಸ್ತಕ ಉತ್ತರ ಹೇಳುತ್ತದೆ. ಕೊರೊನಾ ಏಕೆ ಬರುತ್ತದೆ, ಆಯುರ್ವೇದ ಚಿಕಿತ್ಸಾ ವಿಧಾನಗಳು ಹೇಗಿವೆ ಅನ್ನುವುದನ್ನೆಲ್ಲ ವಿವರಿಸಿದ್ದಾರೆ. 'ಭಾರತೀಯ ಜನಸಮುದಾಯ’ಗಳು ಶತಶತಮಾನಗಳಿಂದ ಇಂತಹ ಸಹಸ್ರಾರು ವಿದ್ಯಮಾನಗಳನ್ನು ಎದುರಿಸಿವೆ. ಚೀನೀಯರ, ಅರಬರ ರೋಗ ನಿರೋಧಕ ಕಸುವಿಗಿಂತ ನಮ್ಮದು ವಿಭಿನ್ನ. ಒಟ್ಟಿನಲ್ಲಿ ಸತ್ವಗುಣ (ಧೈರ್ಯ) ಹೆಚ್ಚಿಸಿಕೊಳ್ಳಿ, ಸಾತ್ವಿಕ ಆಹಾರ, ಆಚಾರಗಳಲ್ಲಿರಿ. ಖಂಡಿತ ನೀವು ರೋಗ ಗೆಲ್ಲಬಲ್ಲಿರಿ. ಅಂಗಳದ ತುಳಸಿಯೊ, ಹಿತ್ತಲಿನ ವೀಳ್ಯದೆಲೆಯೂ ವೈರಾಣು ನಿರೋಧಕವೇ. ಹಾಗಾಗಿ ಪರಿಸರದ ಸಸ್ಯಗಳನ್ನು ಬಳಸಿರಿ, ಬೆಳೆಸಿರಿ,' ಎನ್ನುತ್ತಾರೆ ಡಾ.ಸತ್ಯನಾರಾಯಣ ಭಟ್ ಪಿ. ಕೊರೊನಾ ನೆಪದಲ್ಲಿ ಸಹಜ ಆರೋಗ್ಯದ ಮೂಲ ಮಂತ್ರಗಳನ್ನು ಪುಸ್ತಕದಲ್ಲಿ ನೆನಪಿಸಿದ್ದಾರೆ. ಕೊರೊನಾ ಅಥವಾ ಯಾವುದೇ ಸೋಂಕಿಗೆ ಚಿಕಿತ್ಸೆಗಿಂತಲೂ ತಡೆಯೇ ಮುಖ್ಯ. ಈ ನಿಟ್ಟಿನಲ್ಲಿ ಉಪಯುಕ್ತ ಮಾಹಿತಿಯನ್ನು ವೈದ್ಯರು ನೀಡಿದ್ದಾರೆ.
- ಹ. ಚ. ನಟೇಶಬಾಬು
ಕೃಪೆ : ವಿಜಯ ಕರ್ನಾಟಕ (2020 ಮಾರ್ಚಿ 15)
.......................................................................................
©2024 Book Brahma Private Limited.