ವಸಂತ ಪ್ರಕಾಶನದ ಆರೋಗ್ಯ ಚಿಂತನ ಮಾಲಿಕೆಯಲ್ಲಿ ಪ್ರಕಟವಾದ ಕೃತಿ ಕೋವಿಡ್-19. ಡಾ.ವಸುಂಧರಾ ಭೂಪತಿ ಅವರು ಮಾಲಿಕೆಯ ಸಂಪಾದಕರಾಗಿದ್ದು, ಡಾ.ಪಿ.ಎಸ್. ಶಂಕರ್ ಈ ಕೃತಿಯನ್ನು ರಚಿಸಿದ್ದಾರೆ. ಕೊರೋನಾದ ಎರಡನೆ ಅಲೆ ಆರಂಭವಾಗಿರುವ ಈ ಸಮಯದಲ್ಲಿ ಈಗಾಗಲೇ ಕೋವಿಡ್-19 ಇಡೀ ಜಗತ್ತಿನ ಬಹಳಷ್ಟು ರಾಷ್ಟ್ರಗಳ ಜನಸಮುದಾಯದ ಮೇಲೆ ಬೀರಿದ ದುಷ್ಪರಿಣಾಮವನ್ನು ನೋಡಿದ್ದೇನೆ. ಅನುಭವಿಸಿದ್ದೇವೆ. ಈ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿಯೂ ವೈದ್ಯರಿಗೆ, ವಿಜ್ಞಾನಿಗಳಿಗೆ ಸವಾಲೆತ್ನಿಸುವ ರೀತಿಯಲ್ಲಿ ರೂಪಾಂತರ ಹೊಂದಿ ವಿವಿಧ ಲಕ್ಷಣಗಳನ್ನು ತೋರ್ಪಡಿಸುತ್ತಿರುವ ಕೊರೋನಾ ವೈರಸ್ ಸಮೂಹವನ್ನು ನಿಯಂತ್ರಿಸುವಲ್ಲಿ ಪಟ್ಟ ಪಡಿಪಾಟಲು ಕಣ್ಣಮುಂದಿದೆ ಎನ್ನುತ್ತಾರೆ ಡಾ. ವಸುಂಧರ ಭೂಪತಿ.
ಈ ಕೃತಿಗೆ ಬೆನ್ನುಡಿ ಬರೆದಿರುವ ಅವರು, ಕೇಳಿಯೇ ಇರದಿದ್ದ ಕ್ವಾರಂಟೈನ್, ಲಾಕ್ ಡೌನ್, ಸೀಲ್ ಡೌನ್ ಪದಗಳನ್ನು ಮಕ್ಕಳು ಕೂಡ ಸಲೀಸಾಗಿ ಬಳಸುವಂತಾಗಿದೆ. ಕೋವಿಡ್ ರೋಗಾಣು ಸೋಂಕಿತರು ಎದುರಿಸಿದ ತಾರತಮ್ಯ ಹಚ್ಚಹಸಿರಾಗಿದೆ. ವಿದೇಶದಿಂದ ಬಂದು ವಿಮಾನದಲ್ಲಿಳಿಯುವವರನ್ನು ರೋಗ ವಾಹಕರು ಎಂಬಂತೆ ದುರುಗುಟ್ಟಿ ನೋಡಿದ್ದುದು ಉಂಟು. ಮಾಧ್ಯಮಗಳು ಕೋವಿಡ್ ಹೆಮ್ಮಾರಿ, ಮಹಾಮಾರಿ ಅಂತೆಲ್ಲ ದಿನದ 24 ಗಂಟೆಯೂ ಕೂಗುಮಾರಿಯಂತೆ ಕಿರುಚಿ, ಜನರ ಮನದಲ್ಲಿ ಭಯದ ಬೀಜವನ್ನು ಬಿತ್ತಿ ಮತ್ತಷ್ಟು ಭಯಭೀತರಾಗಿಸಿದ್ದು ಸುಳ್ಳಲ್ಲ. ಇವೆಲ್ಲದರ ಮಧ್ಯೆ, ವೈದ್ಯರು, ಆರೋಗ್ಯ ಕಾರ್ಯಕರ್ತರು, ನರ್ಸ್ ಗಳು, ಆಶಾ ಕಾರ್ಯಕರ್ತರು, ಪೊಲೀಸರು, ಪೌರಕಾರ್ಮಿಕರು ತಮ್ಮ ಹಾಗೂ ಕುಟುಂಬದ ಆರೋಗ್ಯವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸಿದ್ದು ಎಲ್ಲರ ಗೌರವಕ್ಕೆ ಪಾತ್ರವಾಗಿದೆ. ಕೋವಿಡ್-19 ತಂದೊಡ್ಡಿದ ಸಾಮಾಜಿಕ, ಕೌಟುಂಬಿಕ, ಆರ್ಥಿಕ ಸಂಕಷ್ಟಗಳ ಭೀಕರತೆ ಅಪಾರ. ಕೋವಿಡ್-19 ವೈದ್ಯರಿಗೂ ಹೊಸದು, ರೋಗಿಗಳಿಗೆ ಇನ್ನೂ ಹೊಸತು. ಹೇಗೆ ನಿಭಾಯಿಸಬೇಕೆಂಬುದನ್ನು ಕ್ಷಣಕ್ಷಣಕ್ಕೂ ವೈದ್ಯ ಜಗತ್ತು ಕಲಿಯುತ್ತ ಹೋಯಿತು. ಕೊರೋನಾ ವೈರಸ್ ನ ಮೂಲ, ಹರಡುವ ವಿಧಾನ, ರೋಗ ಲಕ್ಷಣಗಳು, ಪರೀಕ್ಷೆಗಳು ಚಿಕಿತ್ಸಾ ವಿಧಾನಗಳು, ಮಾರಣಾಂತಿಕವಾದ ಬಗೆ, ವ್ಯಾಕ್ಸಿನ್ ಮುಂತಾದ ವಿಷಯಗಳ ಬಗ್ಗೆ ಕೋವಿಡ್-19 ಕೃತಿ ಸಮಗ್ರವಾಗಿ ಅರಿವು ಮೂಡಿಸುತ್ತದೆ.
©2024 Book Brahma Private Limited.