ನಮ್ಮ ಮಾನಸಿಕ, ಸಾಮಾಜಿಕ ಸ್ಥಿತಿಗತಿಗಳು, ಬದಲಾದ ಜೀವನ ಶೈಲಿ, ಉದ್ಯೋಗ, ಒತ್ತಡಗಳು ಎಲ್ಲವೂ ಒಟ್ಟಾಗಿ ನಮ್ಮ ಆರೋಗ್ಯದ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ಆಪ್ತ ಸಮಾಲೋಚನೆಯ ರೀತಿಯಲ್ಲಿ ತಿಳಿಸಿಕೊಡುವ ಕೃತಿ ಲೇಖಕ ಪಿ.ಎಸ್.ಶಂಕರ್ ಅವರ ‘ಆರೋಗ್ಯ ಸುಖ-ಸಂತೋಷಕ್ಕೆ ಅಡಿಪಾಯ’ ಕೃತಿ. ಕೃತಿಯು 35 ಅಧ್ಯಾಯಗಳನ್ನು ಒಳಗೊಂಡಿದೆ. ಮನುಷ್ಯನ ಬದುಕಿನ ವಿವಿಧ ಮಜಲುಗಳಲ್ಲಿ ಎದುರಾಗುವ ಸನ್ನಿವೇಶಗಳು, ಅವುಗಳನ್ನು ಅವಕಾಶಗಳನ್ನಾಗಿಸುವ ಪರಿ, ಜೀವನೋತ್ಸಾಹ, ಹಾಸ್ಯ ಪ್ರಜ್ಞೆ ಸೇರಿದಂತೆ ಹಲವಾರು ವಿಚಾರಗಳ ಮಾಹಿತಿಯನ್ನು ಇಲ್ಲಿ ಕಾಣಬಹುದು. ಆರೋಗ್ಯದ ಚಿಂತನೆಯೆಂದರೆ ಕೇವಲ ದೇಹ ರಚನೆ ಮತ್ತು ಅದರ ಕಾರ್ಯಗಳಷ್ಟೇ ಅಲ್ಲ. ಅದರಾಚೆಗಿನ ವಿಸ್ತಾರವನ್ನೂ ಹೊಂದಿದೆ ಎಂಬುದನ್ನು ಇಲ್ಲಿನ ಬರಹಗಳಲ್ಲಿ ಕಾಣಬಹುದು.ಇನ್ನು ಕೇವಲ ಆರೋಗ್ಯದ ಸಲಹೆಯನ್ನು ನೀಡುವುದಷ್ಟೇ ಅಲ್ಲ, ನಮ್ಮ ವರ್ತನೆ, ಆಲೋಚನಾ ಕ್ರಮಗಳ ಮೇಲೂ ಬೆಳಕು ಚೆಲ್ಲವುದನ್ನು ಇಲ್ಲಿನ ಬರಹಗಳಲ್ಲಿ ಕಾಣಬಹುದು. ಸಕಾರಾತ್ಮಕ ಆಲೋಚನೆಗಳೊಂದಿಗೆ ವೈದ್ಯ ವೃತ್ತಿಯ ನೈತಿಕ ಮೌಲ್ಯಗಳನ್ನೂ ಚರ್ಚಿಸಿದೆ. ಜೀವನ ಮೌಲ್ಯಗಳ ಬಗ್ಗೆಯೂ ತಿಳಿಸುತ್ತಾ, ವ್ಯಕ್ತಿತ್ವ ವಿಕಸನದ ಅಂಶಗಳನ್ನೂ ಒಳಗೊಂಡಿದೆ.
©2024 Book Brahma Private Limited.