ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಮೂರು ಭಾಷಣ ಮತ್ತು ಮೂರು ಲೇಖನಗಳನ್ನು ಹೊಂದಿರುವ ಕೃತಿ ’ವೀಸಾದ ನಿರೀಕ್ಷೆಯಲ್ಲಿ ನೆನಪುಗಳು’. ಇಂಗ್ಲಿಷ್ನಲ್ಲಿ ಪ್ರಕಟವಾಗಿದ್ದ ಕೃತಿಯನ್ನು ಕನ್ನಡೀಕರಿಸಿದವರು ಸದಾಶಿವ ಮರ್ಜಿ.
ಅಂಬೇಡ್ಕರ್ ಜಾತಿಯ ಕಾರಣಕ್ಕಾಗಿ ಅನುಭವಿಸಿದ ಅವಮಾನಗಳ ವರ್ಣನೆ ಕೃತಿಯಲ್ಲಿದೆ. ವಿವಿಧ ಕಾಲಘಟ್ಟದಲ್ಲಿ ಅವರು ಸ್ವತಃ ಅವಮಾನಕ್ಕೊಳಗಾದ ಆರು ಘಟನೆಗಳನ್ನು ವಿವರಿಸಲಾಗಿದೆ. ಹಣಕಾಸಿನ ಸಮಸ್ಯೆ ಇಲ್ಲದಿದ್ದರೂ ಜಾತಿ ಹಾಗೂ ಅಸ್ಪೃಶ್ಯತೆಯ ಕಾರಣದಿಂ ತಾವು ಅನುಭವಿಸಿದ ಸಂಕಟಗಳನ್ನು ಅಂಬೇಡ್ಕರ್ ತೋಡಿಕೊಂಡಿದ್ದಾರೆ. ವಿಪರ್ಯಾಸ ಎಂದರೆ ಶೋಷಿತ ಸಮುದಾಯಗಳೇ ಅವರನ್ನು ಇನ್ನಷ್ಟು ಶೋಷಿಸುತ್ತಿದ್ದರು. ಮಡಿವಾಳರು ಅವರ ಬಟ್ಟೆಗಳನ್ನು ತೊಳೆಯಲು ಒಪ್ಪುತ್ತಿರಲಿಲ್ಲ. ಕ್ಷೌರಿಕರು ಕ್ಷೌರ ಮಾಡಲು ಇಚ್ಛಿಸುತ್ತಿರಲಿಲ್ಲ. ಎತ್ತಿನ ಗಾಡಿಯಲ್ಲಿ ಪ್ರಯಾಣಿಸುವುದು ಕೂಡ ಕಷ್ಟ ಎಂಬ ಸ್ಥಿತಿ ಇತ್ತು. ನೀರು ಪಡೆದು ಕುಡಿಯುವುದಂತೂ ಅಪರಾಧ ಎಂಬ ಸ್ಥಿತಿ ಇತ್ತು. ಅದು ಹಿಂದೂ ಜಾತಿಗೆ ಮಾತ್ರ ಸೀಮಿತವಾದ ಶೋಷಣೆಯಾಗಿರಲಿಲ್ಲ. ಮುಸ್ಲಿಮರೂ ಅಸ್ಪೃಶ್ಯರನ್ನು ಮೂಲೆಗುಂಪಾಗಿಸಿದ್ದರು ಎನ್ನುವ ಅಂಬೇಡ್ಕರ್ ಇದಕ್ಕೆ ಬೌದ್ಧಧರ್ಮದಲ್ಲಿ ಪರಿಹಾರವಿದೆ ಎಂಬುದನ್ನು ಸೂಚಿಸುತ್ತಾರೆ. ಬುದ್ಧ ಮೋಕ್ಷದಾತನಾಗಿರಲಿಲ್ಲ ಮಾರ್ಗದಾತನಾಗಿದ್ದ ಎಂದು ಸ್ಪಷ್ಟವಾಗಿ ಹೇಳುತ್ತಾರೆ.
ಪ್ರಜಾಪ್ರಭುತ್ವ ನಿರ್ಜೀವವಾದರೆ ಅದು ನಮ್ಮ ಅಂತ್ಯವೇ' ಎನ್ನುವ ಲೇಖನ ವರ್ತಮಾನಕ್ಕೆ ಹೆಚ್ಚು ಪ್ರಸ್ತುತವಾಗುತ್ತದೆ. ಪ್ರಜಾಪ್ರಭುತ್ವ ಉಳಿಯುವುದು ಶೋಷಿತ ವರ್ಗಕ್ಕೆ ಎಷ್ಟು ಅಗತ್ಯ ಎನ್ನುವುದನ್ನು ಅವರು ವಿವರಿಸುತ್ತಾರೆ. ಹಾಗೆಯೇ ಅಖಿಲ ಭಾರತ ಪರಿಶಿಷ್ಟ ಜಾತಿ ಫೆಡರೇಶನ್ನಲ್ಲಿ ಅವರು 'ಕೋಮುವಾರು ಪ್ರಶ್ನೆ ಮತ್ತು ಭಾರತೀಯ ಸಂವಿಧಾನ ರಚನೆ' ಬಗ್ಗೆ ಮಾತನಾಡಿದ್ದಾರೆ. ಆ ಭಾಷಣದ ಉಲ್ಲೇಖವೂ ಕೃತಿಯಲ್ಲಿದೆ.
©2024 Book Brahma Private Limited.