ಸೈಯದ್ ಭಾಯಿ ಎಂಬುವರು ‘ಏಕಪಕ್ಷೀಯ ತಲಾಖ್ ವಿರುದ್ಧ ನಮ್ಮ ಯುದ್ಧ’ ಎಂಬ ಉಪಶೀರ್ಷಿಕೆಯಡಿ ಮೂಲ ಮರಾಠಿಯಲ್ಲಿ ಬರೆದ ವಿಚಾರಪೂರ್ಣ ಬರಹಗಳನ್ನು ಅಂಜಲಿ ಪಟವರ್ಧನ ಕುಲಕರ್ಣಿ ಅವರು ಇಂಗ್ಲಿಷಿಗೆ ಅನುವಾದಿಸಿದ್ದನ್ನು ಲೇಖಕಿ ಸಾರಾ ಅಬೂಬಕರ್ ಅವರು ಕನ್ನಡೀಕರಿಸಿದ ಕೃತಿಯೇ-ಮುಸ್ಲಿಂ ಮಹಿಳೆಯರು ಮತ್ತು ತಲಾಖ್. ಸ್ವತಃ ತಂಗಿಯು ತಲಾಖ್ ಕ್ರೌರ್ಯಕ್ಕೆ ಒಳಗಾದಾಗ ಲೇಖಕ ಸೈಯದ್ ಭಾಯಿ ಅವರು ವಿವಿಧ ಹಂತಗಳಲ್ಲಿ ಹೋರಾಟ ನಡೆಸಿದ್ದರ ಫಲವೇ ಈ ಕೃತಿ. 1985ರ ಸುಮಾರಿಗೆ ಸುಪ್ರೀಂಕೋರ್ಟ್ ಶಾಬಾನು ಪ್ರಕರಣದಲ್ಲಿ ಮಹತ್ವದ ತೀರ್ಪು ಅಂದರೆ ವಿಚ್ಛೇದಿತ ಮಹಿಳೆಗೆ ಜೀವನಾಂಶ ನೀಡುವಂತೆ ಆದೇಶಿಸಿತ್ತು. ತಾಹಿರಾಬಿ ಅವರ ಪ್ರಕರಣದಲ್ಲೂ (1974) ಸುಪ್ರೀಂಕೋರ್ಟ್ ಸಿಆರ್ ಪಿಸಿ 125ರನ್ವಯ ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಜೀವನಾಂಶ ನೀಡುವಂತೆ ನಿರ್ದೇಶಿತ್ತು. ಆದರೆ, ಸರ್ಕಾರ ವಿಚ್ಛೇದಿತ ಮಹಿಳೆಗೆ ಒಂದೆರೆಡು ಸಾವಿರ ರೂ. ಜೀವನಾಂಶ ನೀಡಿದರೆ ಸಾಕು ಎಂದು ಸಿಆರ್ ಪಿಸಿ 127 (3) ಕಾನೂನು ರೂಪಿಸಿತು. ಆದರೆ, ಇದು ತಲಾಖ್ ಪ್ರಕರಣಗಳನ್ನು ಹೆಚ್ಚಿಸುತ್ತದೆ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್ ಇದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಅಂದಿನ ಪ್ರಧಾನಿ ರಾಜೀವ್ ಗಾಂಧಿ ಸಹ ತೀರ್ಪನ್ನು ಗೌರವಿಸಿದ್ದರು. ಮುಂದೆ, ಅವರ ರಾಜಕೀಯ ನಡೆ ಹೇಗೆ ಬದಲಾಯಿತು ಎಂಬ ಬಗ್ಗೆ ವಿವರಣೆ ಇದೆ. ಸುಪ್ರೀಂ ತೀರ್ಪಿನ ವಿರುದ್ಧ ಅಂದರೆ ದೇಶದಲ್ಲಿ ಮುಸ್ಲಿಂ ಅಪಾಯದಲ್ಲಿದೆ ಎಂದು ಪ್ರತಿಭಟನೆಗಳೂ ನಡೆದವು. ನಂತರ ಅಂದಿನ ರಾಷ್ಟ್ರಪತಿ ಜೈಲ್ ಸಿಂಗ್ ನಡೆ, ಮುಸ್ಲಿಂ ಸಂಸದರ, ನಾಯಕರ ನಡೆಗಳು, ಪಕ್ಷ ಕೇಂದ್ರಿತ ಅಭಿಪ್ರಾಯಗಳು, ಮಸ್ಲಿಂ ಸಮುದಾಯ ಮಾತ್ರವಲ್ಲ; ಇತರೆ ಧರ್ಮಿಯರ ಸ್ಪಂದನ-ವಿರೋಧಗಳು ಎಲ್ಲವನ್ನೂ ದಾಖಲಿಸಿದ ಮಹತ್ವದ ಕೃತಿ ಇದು.
©2024 Book Brahma Private Limited.