'ಇದು ಯಾವ ಸೀಮೆಯ ಚರಿತ್ರೆ?' ಕೃತಿಯಲ್ಲಿ ಅಜಿತ್ ಪಿಳ್ಳೆ ಅವರು ತಮ್ಮ ವೃತ್ತಿ ಸಂಬಂಧದ ಓಡಾಟದಲ್ಲಿ ಕಂಡದ್ದನ್ನು ಕಂಡ ಹಾಗೆ ನಿರೂಪಿಸಿದ್ದಾರೆ. ಪತ್ರಕರ್ತ ಸತೀಶ್ ಜಿ. ಟಿ. ಈ ಬರಹವನ್ನು ಆಕರ್ಷಕವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿಯನ್ನು ಓದುತ್ತಾ ಹೋದಂತೆ ಬಾಬರಿ ಮಸೀದಿ ಧ್ವಂಸದ ಅನಂತರ ಏಳುವ ಗಲಭೆ, ಸಾವು, ನೋವು, ಯಾವ ಹೊತ್ತಿಗೆ ಏನಾದರೂ ಆಗಬಹುದು ಎಂಬ ಆತಂಕದ ಕ್ಷಣಗಳಲ್ಲಿ ಬೀದಿ ಬೀದಿ ಅಲೆದು ವರದಿ ಸಂಗ್ರಹಿಸುವ ಅಜಿತ್ ಅವರೊಳಗಿನ ಪತ್ರಕರ್ತನ ದಿಟ್ಟತನ, ಬದ್ಧತೆ ಮತ್ತು ಕಾಳಜಿಗಳು ಅವರ ವೃತ್ತಿ ಜೀವನದುದ್ದಕ್ಕೂ ಕಿಂಚಿತ್ತೂ ಮುಕ್ಕಿಲ್ಲದೆ ಮುಂದುವರಿಯುವುದನ್ನು ಮತ್ತು ಈ ದೇಶದ ದಿಕ್ಕನ್ನೇ ಬದಲಿಸಿದ ಹಲವು ಹತ್ತು ಘಟನೆಗಳು ಮತ್ತು ಘಳಿಗೆಗಳನ್ನು ತನ್ನ ವರದಿಗಾರಿಕೆಯ ಮೂಲಕ ಕಟ್ಟಿಕೊಡುವುದನ್ನು ಕಾಣಬಹುದು. ಹಲವು ಹಗರಣಗಳು ಹೇಗೆ ಅವರ ವರದಿಗಾರಿಕೆಯ ಮೂಲಕವೇ ಹೊರಬೀಳುವಂತಾಯಿತು, ಅದರ ಅನಂತರ ಪರಿಣಾಮಗಳೇನು ಎನ್ನುವುದನ್ನು ಈ ಕೃತಿಯ ಮೂಲಕ ನಾವು ಅರಿಯಬಹುದಾಗಿದೆ. ಒಬ್ಬ ಪತ್ರಕರ್ತನ ಆತ್ಮವೃತ್ತಾಂತ ಪರೋಕ್ಷವಾಗಿ ಸಮಾಜದ ಆತ್ಮವೃತ್ತಾಂತವಾಗಿ ವಿಸ್ತಾರಗೊಳ್ಳುವುದನ್ನು ಈ ಕೃತಿಯಲ್ಲಿ ನಾವು ಕಾಣಬಹುದು. ಸಮಾಜವನ್ನು ಕಟ್ಟುವಲ್ಲೂ, ಒಡೆಯುವಲ್ಲೂ ಅವನ ಪಾತ್ರವೆಷ್ಟು ಎನ್ನುವುದನ್ನು ಈ ಕೃತಿ ತೆರೆದಿಡುತ್ತದೆ. ಇಲ್ಲಿರುವ ಎಲ್ಲ ಬರಹಗಳಿಗೂ ಒಂದು ಕಥನಗುಣವಿದೆ. ಈ ಕಾರಣದಿಂದಲೇ ಎಲ್ಲ ಅಧ್ಯಾಯಗಳೂ ನಮ್ಮನ್ನು ಕುತೂಹಲದಿಂದ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ.
©2024 Book Brahma Private Limited.