ಮರಾಠಿಯ ಹೆಸರಾಂತ ಲೇಖಕ ಶರದ ಬೇಡೆಕರ್ ಅವರ ಚಿಂತನಪೂರ್ಣ ಲೇಖನಗಳನ್ನು ಅನುವಾದಕ ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಸಮಗ್ರ ನಿರೀಶ್ವರವಾದ. ದೇವರ ಬಗೆಗಿನ ಕಲ್ಪನೆ ತೀರಾ ಪ್ರಾಚೀನವಾದುದು. ಮನುಷ್ಯನ ಬುದ್ದಿ-ಮನಸ್ಸು ವಿಕಾಸಗೊಂಡರೂ ದೇವರ ಕಲ್ಪನೆಗಳ ಕುರಿತ ನಂಬಿಕೆಗಳು ಬದಲಾಗಿಲ್ಲ. ದೇವರ ಅಸ್ತಿತ್ವವನ್ನೇ ಪ್ರಶ್ನೆ ಮಾಡಲಾಗುತ್ತಿದೆ. ವೈಜ್ಞಾನಿಕ ಯುಗದಲ್ಲೂ ಪ್ರಶ್ನೆಗಳ ಸಂಖ್ಯೆ ಹೆಚ್ಚುತ್ತಿದೆಯೇ ವಿನಃ ಸಮಾಧಾನಕರ ಉತ್ತರ ಮಾತ್ರ ಸಿಗುತ್ತಿಲ್ಲ. ಜ್ಞಾನಿಗಳು ತಮ್ಮ ಜ್ಞಾನದ ನೆಲೆಯಲ್ಲಿ ಉತ್ತರ ಕಂಡುಕೊಂಡು ಸರ್ವರ ದೇವರು ಒಬ್ಬನೇ ಎಂದು ಹೇಳಿದರೂ ಜನರು ಮಾತ್ರ ತಮಗೆ ತಿಳಿತಿಳಿದಂತೆ ವ್ಯಾಖ್ಯಾನಿಸುವುದು ಇಂದಿಗೂ ಮುಂದುವರಿದಿದೆ. ನಿರೀಶ್ವರವಾದಿಗಳು ಖಡಾಖಂಡಿತವಾಗಿ ದೇವರ ಇರುವಿಕೆಯನ್ನು ಅಲ್ಲಗಳೆದಿದ್ದಾರೆ. ಈ ಅನಾದಿ - ಅನಂತ ವಿಶ್ವವು ಹಲವು ಪಂಡಿತೋತ್ತಮರ ಬುದ್ಧಿ ಮತ್ತೆಗೆ ಸಿಲುಕದ ಸೋಜಿಗವಾದರೂ ವಿಜ್ಞಾನಿಗಳು ಹೆಚ್ಚಿನಂಶ ನಿಗೂಢಗಳನ್ನು ಬಯಲಿಗೆಳೆದು ಪ್ರಯೋಗಸಹಿತ ಪ್ರಮಾಣೀಕರಿಸಿದ್ದಾರೆ. ಈಶ್ವರವಾದಿಗಳು ದೇವರು ನಿರಾಕಾರಿ, ಅಂತಃಚಕ್ಷುಗಳಿಂದ ಮಾತ್ರ ಅರಿಯುವ ಅಗೋಚರ ಶಕ್ತಿ ಎಂದರು. ಹಲವು ದೇವರುಗಳನ್ನು ಸೃಷ್ಟಿಸಿದರು, ತನ್ನಂತೆಯೇ ರೂಪ ಕೊಟ್ಟರು, ಗುಡಿಗಳಲ್ಲಿ ಬಂಧಿಸಿಟ್ಟರು. ಕಲ್ಲು ದೇವರ ವಿಗ್ರಹಕ್ಕೆ ಅಪಾರ ಪ್ರಮಾಣದ ಬೆಲೆಬಾಳುವ ಆಹಾರ ಪದಾರ್ಥಗಳನ್ನು ಪೂಜೆಯ ನೆಪದಲ್ಲಿ ಸುರಿದು ಪೋಲು ಮಾಡಿದರು. ಇಲ್ಲದ ದೇವರನ್ನು ಸೃಷ್ಟಿಸಿ ಮುಗ್ಧ ಜನರನ್ನು ನಂಬಿಸಿ ಸುಲಿಗೆ ಮಾಡಿದರು. ದೇವರ ಹೆಸರಿನಲ್ಲಿ ಮನುಷ್ಯ ಸ್ವಾರ್ಥಿಯಾಗತೊಡಗಿದ! ನಿರೀಶ್ವರವಾದಿಗಳು ಸ್ವತಂತ್ರವಾಗಿ ಯೋಚಿಸತೊಡಗಿದರು. ಹೀಗೆ, ಈಶ್ವರವಾದಿ-ನಿರೀಶ್ವರವಾದಿ ತಂತಮ್ಮ ಅನಿಸಿಕೆಗಳನ್ನು ಪ್ರಸ್ತುತಪಡಿಸಿದಂತೆ ರೂಪಿಸಿದ್ದು ಈ ಕೃತಿಯ ವೈಶಿಷ್ಟ್ಯ.
©2024 Book Brahma Private Limited.