ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರ ಬಗ್ಗೆ ಅಂಬೇಡ್ಕರ್ ಅವರ ನಿಲುವು ಏನಾಗಿತ್ತು ಎಂಬ ಅಂಶವನ್ನು ಕೇಂದ್ರವಾಗಿರಿಸಿಕೊಂಡ ಪುಸ್ತಕ. ಈ ಗ್ರಂಥದಲ್ಲಿ ಅಂಬೇಡ್ಕರ್ ಅವರ ನಿಲುವುಗಳ ಬಗ್ಗೆ ಹರಡಿರುವ ಸತ್ಯ-ಮಿಥ್ಯೆಗಳ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ. ಬೆನ್ನುಡಿಯಲ್ಲಿ ಸುದೀಪ್ ಹೆಂಡ್ಸ್ ಅವರು ’ಸೈದ್ಧಾಂತಿಕವಾಗಿ ಮುಸ್ಲಿಮರು ಮತ್ತು ಕ್ರೈಸ್ತರ ಬಗ್ಗೆ ಸಂಘ ಪರಿವಾರವು ಯಾದ ನಿಲುವನ್ನು ತಳೆದಿದೆಯೋ ಅದೇ ನಿಲುವನ್ನು ದಲಿತರ ಬಗ್ಗೆಯೂ ತಳೆದಿದೆ. ಆದ್ದರಿಂದ ಈ ಸಮುದಾಯಗಳು ಬ್ರಾಹ್ಮಣವಾದಿಗಳ ಮತ್ತು ಹಿಂದುತ್ವದ ಶಕ್ತಿಗಳ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು. ದಲಿತರ ಮೇಲಿನ ದೌರ್ಜನ್ಯಗಳು ಕೊನೆಗೊಂಡಿಲ್ಲ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುವ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳು ಮತ್ತು ಅಪಮಾನಗಳಿಗೆ ಅವರೇ ಹೊಣೆಗಾರರೆನ್ನಲಾಗುತ್ತಿದೆ. ದಲಿತರು ಸಂಘ ಪರಿವಾರದ ಹಿಂಬಾಲಕರಾಗಿ ತಮ್ಮ ಹಕ್ಕುಗಳನ್ನು ಮತ್ತು ಅಂಬೇಡ್ಕರ್ರವರು ಬೆಳಗಿದ ಹೋರಾಟದ ಕೆಚ್ಚನ್ನು ಬ್ರಾಹ್ಮಣವಾದಿಗಳ ಪಾದಗಳಿಗರ್ಪಿಸಿ ಅವರು ನೀಡಿರುವ ಸವಲತ್ತುಗಳಿಗೆ ಅಂಗಲಾಚುತ್ತಾ ಬದುಕಬೇಕಾದ ಪರಿಸ್ಥಿತಿಯು ನಿರ್ಮಾಣವಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷವು ಬಿಜೆಪಿಯ ಮಿತ್ರ ಪಕ್ಷವಾಗಿ ರಾಜ್ಯದಲ್ಲೂ, ಕೇಂದ್ರದಲ್ಲೂ ಅದನ್ನು ಸುಸ್ಥಿರಗೊಳಿಸುವಲ್ಲಿ ಕೈಗೊಂಬೆಗಳಂತೆ ವರ್ತಿಸಿದ್ದಾರೆ. ದಲಿತ ಸಮುದಾಯಗಳಿಗೆ ಸೇರಿದ ಕೆಲವು ಮುಖಂಡರು ಅಂಬೇಡ್ಕರ್ ರವರ ಹಿಂದುತ್ವ ವಿರೋಧಿ ಸಿದ್ಧಾಂತಕ್ಕೆ ತಿಲಾಂಜಲಿಯಿತ್ತು ಸಂಘ ಪರಿವಾರದೊಂದಿಗೆ ಕೈ ಜೋಡಿಸಿದ್ದಾರೆ. ಇದು ಸಂಘ ಪರಿವಾರದ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದು ವಿವರಿಸಿದ್ದಾರೆ.
ಹೊಸತು-2005
ಧೀಮಂತ ಚಿಂತಕರ ವಿಚಾರಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ತಿರುಚಿ ಸಮಾಜದಲ್ಲಿ ಗೊಂದಲವನ್ನು ಉಂಟುಮಾಡುವುದು ಒಂದು ಪ್ರವೃತ್ತಿ ತಮ್ಮ ಬರಹಗಳಲ್ಲಿ ಅಂಬೇಡ್ಕರ್ ಅವರು ಹಿಂದೂ ಧರ್ಮದ ದೋಷಗಳನ್ನು ತಿಳಿಸಿರುವಂತೆ ಮುಸ್ಲಿಂ ಧರ್ಮದ ಮಿತಿಗಳನ್ನು ಗುರುತಿಸಿದ್ದಾರೆ. ಆ ಸಂಗತಿಗಳನ್ನು ತಪ್ಪಾಗಿ ಗ್ರಹಿಸಿ ಸಂಘ ಪರಿವಾರ, ಅದರಲ್ಲೂ ಉತ್ತರ ಪ್ರದೇಶದ ಬಿ.ಜೆ.ಪಿ. ಅಧ್ಯಕ್ಷ ವಿನಯ್ ಕಟಿಯಾರ್, ಅಂಬೇಡ್ಕರ್ ಮುಸ್ಲಿಂ ವಿರೋಧಿ ಎಂಬ ಪ್ರಚಾರವನ್ನು ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಆನಂದ್ ಅವರು ಅಂಬೇಡ್ಕರ್ ಅವರ ಬರಹಗಳ ಮೂಲಕವೇ ಅವರು ಮುಸ್ಲಿಂ ವಿರೋಧಿ ಅಲ್ಲ ಎಂಬ ಸಂಗತಿಯನ್ನು ಈ ಪುಸ್ತಕದಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ. ಇಂದಿನ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಜಾತ್ಯತೀತ ಪ್ರಜಾಪ್ರಭುತ್ವದ ಸರಿಯಾದ ತಿಳುವಳಿಕೆ ಅತ್ಯಾವಶ್ಯಕ. ಅನುವಾದದಲ್ಲಿ ಸಾಕಷ್ಟು ಅನುಭವ ಹೊಂದಿರುವ ಬಿ. ಗಂಗಾಧರಮೂರ್ತಿ ಯವರು ಇಂಗ್ಲಿಷ್ನ ಕೃತಿಯನ್ನು ಸಮರ್ಥವಾಗಿ ಕನ್ನಡಕ್ಕೆ ತಂದಿದ್ದಾರೆ.
©2024 Book Brahma Private Limited.