‘ಸಮಾಜವಾದ- ಅಧ್ಯಯನ’ ಸಮಾಜವಾದದ ನಾಯಕ ಅಶೋಕ ಮೆಹತಾ ಅವರ ವೈಚಾರಿಕ ಬರಹಗಳ ಕನ್ನಡಾನುವಾದ. ಈ ಮಹತ್ವದ ಬರಹಗಳನ್ನು ಖಾದ್ರಿ ಎಸ್. ಅಚ್ಯೂತನ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಸಮಾಜವಾದ ಅಧ್ಯಯನಕ್ಕೆ ನೆರವಾಗುವ ಈ ಕೃತಿಯಲ್ಲಿ ಭಾರತೀಯ ಸಮಾಜವಾದದ ಹಲವು ನೆಲೆಗಳನ್ನು ವಿಮರ್ಶಿಸಲಾಗಿದೆ.
ಸುಮಾರು 150 ವರ್ಷಗಳಿಂದ ಸಮಾಜವಾದಿ ಚಿಂತನೆ ಮತ್ತು ಚಳವಳಿ ವಿಕಸಿತಗೊಳ್ಳುತ್ತಿದೆ ಮತ್ತು ಅದರ ಅಧ್ಯಯನ ಆಳನೋಟ ಮತ್ತು ಹೊಸದರ್ಶನ ನೀಡಬಲ್ಲುದು. ಏಷ್ಯಾದ ದೇಶಗಳವರಿಗೆ, ನಮ್ಮ ದೇಶಗಳ ನಿರ್ದಿಷ್ಟ ಪರಿಸ್ಥಿತಿಗಳಿಗೆ ಅನುಗುಣವಾಗಿ ನಮ್ಮ ಸಮಾಜವಾದೀ ಭವಿಷ್ಯ ಹೊಸದಾಗಿ ಯೋಜಿಸುವ ಮತ್ತು ಅಭಿವ್ಯಕ್ತಗೊಳಿಸುವ ಅಗತ್ಯ ಮತ್ತು ಅವಕಾಶವೆರಡೂ ಇದೆ. ಸಮಾಜವಾದ ವಿಶ್ವಮಾನ್ಯ ದರ್ಶನವಾದರೂ ಸಹ, ಏಷ್ಯಾದ ಸ್ಥಿತಿಗಳಿಗೆ ಅನುಸಾರ ಅದರ ಮರುವ್ಯಾಖ್ಯಾನ ಏಷ್ಯನ್ ಸಮಾಜವಾದ ಕುರಿತು ಸಾಮಾನ್ಯ ರೀತಿಯಲ್ಲಿ ಮಾತನಾಡಲು ನಮ್ಮನ್ನು ಬಾಧ್ಯರನ್ನಾಗಿಸುತ್ತದೆ. ಆ ಕಾರಣದಿಂದಾಗಿ ಅಶೋಕ ಮೆಹತಾ ಅವರ ಅಧ್ಯಯನದ ಆರು ವಿಚಾರಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. 1) ಸಮಾಜವಾದದ ಸೋಪಾನ; 2) ಆದರ್ಶವಾದದ ಏರುಮುಖ; 3) ಕಾರ್ಮಿಕ ಮತ್ತು ಸಿದ್ಧಾಂತ; 4) ಪರಿಷ್ಕರಣವಾದದ ಪುನರೋದಯ; 5) ರೈತ ಮತ್ತು ಸಮಾಜವಾದ; 6) ಪುನರ್ ನಿರ್ಮಾಣದ ಅರ್ಥಶಾಸ್ತ್ರ. ಇವು ಅವರ ಅಧ್ಯಯನದ ಆರಂಭಿಕ ಭಾಗ.
ಹಿರಿಯ ಪತ್ರಕರ್ತ, ಲೇಖಕ ಖಾದ್ರಿ ಎಸ್.ಅಚ್ಯುತನ್ ಮೂಲತಃ ಮಂಡ್ಯ ಜಿಲ್ಲೆಯ ಮೇಲುಕೋಟೆಯವರು. ಮೈಸೂರಿನಲ್ಲಿ ಪ್ರೌಢಶಾಲೆ, ಪದವಿ ವ್ಯಾಸಂಗ ಮುಗಿಸಿದ ಅವರು ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಆರಂಭಿಸಿದರು. ನಂತರ 1966ರಲ್ಲಿ ಕೇಂದ್ರ ಸಮಾಚಾರ ಮತ್ತು ಪ್ರಸಾರ ಖಾತೆಯಲ್ಲಿ ಸೇವೆಗೆ ನಿಯುಕ್ತಿಪಡೆದರು, ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಣೆ, ಧಾರವಾಡ, ಪೋರ್ಟ್ಭೇರ್ ಆಕಾಶವಾಣಿಗಳಲ್ಲಿ ಸುದ್ದಿ ಸಂಪಾದಕ; ಬೆಂಗಳೂರು ದೂರದರ್ಶನದಲ್ಲಿ ಮೊದಲಿಗೆ ಸುದ್ದಿ ಸಂಪಾದಕ, ಆಮೇಲೆ ಸುದ್ದಿ ನಿರ್ದೇಶಕ, ಕನ್ನಡ ಯೋಜನಾ ಪತ್ರಿಕೆ ಸುದ್ದಿ ಸಂಪಾದಕ, ಸೆನ್ಸಾರ್ ಮಂಡಳಿ ಪ್ರಾದೇಶಿಕ ಅಧಿಕಾರಿ, ನಿವೃತ್ತಿ ನಂತರ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬೋಧನೆಮಾಡಿದ್ದಾರೆ. ...
READ MORE