ದಲಿತ ರಾಜಕಾರಣವನ್ನು ವಿಮರ್ಶಾತ್ಮಕವಾಗಿ ನೋಡುವ ಕೃತಿ ’ಅಂಬೇಡ್ಕರ್‌ವಾದಿಗಳ ಬಿಕ್ಕಟ್ಟು ಮತ್ತು ಭವಿಷ್ಯದ ಸವಾಲುಗಳು’. ಮಹಾರಾಷ್ಟ್ರದ ಹಿರಿಯ ಚಿಂತಕ ಆನಂದ ತೇಲ್ತುಂಬ್ಡೆ ಬರೆದ ಈ ಪುಸ್ತಕವನ್ನು ಲೇಖಕಿ ಡಾ. ಎಚ್.ಎಸ್. ಅನುಪಮಾ ಕನ್ನಡಕ್ಕೆ ತಂದಿದ್ದಾರೆ. ರಾಜಕೀಯ ವ್ಯವಸ್ಥೆಯ ಭಾಗವಾಗುತ್ತಿರುವ ದಲಿತರು, ಮೇಲ್ಪದರದ ದಲಿತರಲ್ಲಿರುವ ಹೊಣೆಗಾರಿಕೆಯ ಕೊರತೆ ಹಾಗೂ ಫ್ಯಾಸಿಸ್ಟ್ ಶಕ್ತಿಗಳು ದಲಿತರನ್ನು ಆಪೋಶನ ತೆಗೆದುಕೊಳ್ಳುತ್ತಿರುವ ರೀತಿಯನ್ನು ಚರ್ಚಿಸಲಾಗಿದೆ.
ಸ್ಪಷ್ಟ ಸೈದ್ಧಾಂತಿಕತೆ ರೂಪಿಸಿಕೊಳ್ಳುವಲ್ಲಿ ಎಡಪಂಥೀಯರು ಮತ್ತು ದಲಿತರು ಎಡವಿದ್ದು; ಅದರಿಂದ ಇತರರು ಲಾಭ ಪಡೆದದ್ದನ್ನು ಕೃತಿ ಚರ್ಚಿಸುತ್ತದೆ. ಪ್ರಗತಿಪರರೊಂದಿಗೆ ದಲಿತರು ಮಾಡಿಕೊಳ್ಳಬೇಕಾದ ತಾತ್ವಿಕ ಹೊಂದಾಣಿಕೆ ಕುರಿತು ಪ್ರಸ್ತಾಪಿಸುತ್ತದೆ. ಹೀಗಾಗಿ ದಲಿತರ ಆತ್ಮವಿಮರ್ಶೆಯ ಸಾಧನದಂತೆಯೂ ಕೃತಿ ಗೋಚರಿಸುತ್ತದೆ.
(ಹೊಸತು, ಆಗಸ್ಟ್ 2014, ಪುಸ್ತಕದ ಪರಿಚಯ)
ಪ್ರಸ್ತುತ ಪುಸ್ತಕದಲ್ಲಿ ಡಾ| ಎಚ್. ಎಸ್. ಅನುಪಮಾ ಅವರು, ಚಿಂತಕರಾದ ಡಾ| ಆನಂದ ತೇಲ್ತುಂಬ್ಳೆಯವರ ಅಂಬೇಡ್ಕರರ ಚಿಂತನೆಯನ್ನು ಈ ಕಾಲದ ಅಂಬೇಡ್ಕರ್‌ವಾದಿಗಳೆಂದರೆ ಯಾರು ? ಅವರು ಎದುರಿಸುತ್ತಿರುವ ಬಿಕ್ಕಟ್ಟುಗಳೇನು ? ಎಂದು ವಿವರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರರ ವ್ಯಕ್ತಿಪರಿಚಯವನ್ನು, ಅವರೇ ಕಟ್ಟಿದಂತಹ ಸಂಘಟನೆಗಳ ಬಗ್ಗೆ, ಹಿಂದೂಧರ್ಮವನ್ನು ನಿರಾಕರಿಸಿ ಬೌದ್ಧ ಧರ್ಮವನ್ನು ಸ್ವೀಕರಿಸಿದ ಬಗ್ಗೆ ವಿವರಗಳಿವೆ. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದರೂ ಸ್ಟೇಟ್ಸ್ ಅಂಡ್ ಮೈನಾರಿಟೀಸ್' ಆಶಯಗಳು ಸಂವಿಧಾನದಲ್ಲಿ ಅಡಕ ಗೊಳ್ಳುವಂತೆ ಮಾಡಲು ಸಾಧ್ಯವಾಗದಿರುವುದರ ಬಗ್ಗೆ ಅಂದಿನ ಸ್ಥಿತಿಯ ಚಿತ್ರಣ ಕಾಣುತ್ತದೆ. ಸಮಾನತೆ-ಸೋದರತೆ-ಸ್ವಾತಂತ್ರ್ಯ ಆಧಾರದ ಸಮಾಜ ಅಂಬೇಡ್ಕರರ ಕನಸು. ಅದು ನನಸಾಗದೇ ಉಳಿದಿರುವುದಕ್ಕೆ ಕಾರಣಗಳು : ದಲಿತ ಮೇಲ್ವಲನದ ವ್ಯಕ್ತಿಗಳು ಸಾಮಾಜಿಕವಾಗಿ, ರಾಜಕೀಯವಾಗಿ ಮುಂದುವರಿದಂತೆ ಬಂಡವಾಳಶಾಹಿಯನ್ನು ಪ್ರೋತ್ಸಾಹಿಸುತ್ತ ದಲಿತ ಬೂರ್ಶ್ವಾಗಳಾಗಿ ಬದಲಾಗಿ, ಸಾಮಾನ್ಯ ದಲಿತರ ಸಂಬಂಧವನ್ನು ರಾಜಕೀಯ ಸವಾಲುಗಳು ನೆಲೆ ಭದ್ರತೆಗಾಗಿ ಹಾಗೂ ಜನಸಂಖ್ಯಾ ಬೆಂಬಲಕ್ಕಾಗಿ ಮಾತ್ರ ಸೀಮಿತಗೊಳಿಸಿದ್ದಾರೆ. ಇಳಿಯುತ್ತಿರುವ ದಲಿತರ ಜೀವನ ಮಟ್ಟ, ಕಡಿಮೆಯಾಗುತ್ತಿರುವ ಉದ್ಯೋಗಾವಕಾಶ, ಜಾಗತೀಕರಣದ ಪರಿಣಾಮ, ದಲಿತ ಚಳುವಳಿಗಾರರಿಗೆ ಅರ್ಥವಾಗುತ್ತಿಲ್ಲ, ಇನ್ನೂ ಭೂತಕಾಲದ ಘಟನೆಗಳಿಗೆ ಅಂಟಿಕೊಂಡಿದ್ದಾರೆ. ವರ್ತಮಾನದ ಪರಿಸ್ಥಿತಿಯನ್ನು ಗ್ರಹಿಸುತ್ತಿಲ್ಲ. ಅಂಬೇಡ್ಕರ್ ನೀಡಿದ ಕೊಡುಗೆಯನ್ನು ಭಾರತೀಯ ಸಮಾಜ ಗುರುತಿಸುವಲ್ಲಿ ವಿಫಲವಾಗಿ, ಅವರ ಮೂರ್ತೀಕರಣ, ದೈವೀಕರಣಗೊಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅಂಬೇಡ್ಕರರ ಚಿಂತನೆಗಳನ್ನು ಮೇಲ್ಪದರದಲ್ಲಿ ಕಾಣದೇ ಆಳವಾಗಿ ಅರ್ಥೈಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆಯೆಂಬುದು ಚಿಂತಕರ ಆಶಯವಾಗಿದೆ.
©2024 Book Brahma Private Limited.