‘ರಾಜಮಾರ್ಗ’ ಕೃತಿಯು ಕೆ. ಜೈರಾಜ್ ಅವರ ಆಡಳಿತ ಅನುಭವಗಳ ಲೇಖನಗಳ ಸಂಕಲನ. ಕೃತಿಗೆ ಬೆನ್ನುಡಿ ಬರೆದಿರುವ ನ್ಯಾಯಮೂರ್ತಿ ಎಂ. ಎನ್. ವೆಂಕಟಾಚಲಯ್ಯ , `ಭಾರತ ಆಡಳಿತ ಸೇವೆ ಅಧಿಕಾರಿಗಳಲ್ಲಿ ಒಬ್ಬರಾದ ಕೆ. ಜೈರಾಜ್ ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ಸಾರ್ವಜನಿಕ ಹಿತಾಸಕ್ತಿಯ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ನಾನು ಹತ್ತಿರದಿಂದ ಕಂಡಂತೆ ರಾಜ್ಯ ಸರ್ಕಾರದ ಪ್ರತಿನಿಧಿಗಳಾಗಿ ಸೋಸಲೆ ಶ್ರೀ ವ್ಯಾಸರಾಜ ಮಠದ ಆಡಳಿತವನ್ನು ಆರು ವರ್ಷಗಳ ಕಾಲ ಮುನ್ನಡೆಸಿಕೊಂಡು ಹೋದ ರೀತಿಯಲ್ಲಿ ಅವರ ವಿಭಿನ್ನ ಆಡಳಿತ ಪದ್ಧತಿ ಕಾಣುತ್ತದೆ. ಗೊಂದಲ ಹಾಗೂ ಗೋಜಲಿನ ಗೂಡಾಗಿದ್ದ ಮಠದ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಅವರು ತೋರಿದ ಆಡಳಿತ ಕೌಶಲ್ಯ ಇನ್ನಿತರ ಮಠಗಳಿಗೂ ಮಾದರಿಯಾಗುವಂತಹುದು. ಕೆ. ಜೈರಾಜ್ ಅವರು ಸಾಮಾಜಿಕ ಕಾಳಜಿಯನ್ನಿರಿಸಿಕೊಂಡು ವಿವಿಧ ವಿಷಯಗಳ ಬಗ್ಗೆ ಬರೆದಿರುವ ಬರಹಗಳು ಸಮಕಾಲೀನ ಪ್ರಸ್ತುತತೆಯಿಂದ ಕೂಡಿದೆ. ಒಬ್ಬ ಹಿರಿಯ ಸರ್ಕಾರಿ ಅಧಿಕಾರಿಯಾಗಿ ತಮ್ಮ ಸುದೀರ್ಘ ಮತ್ತು ಫಲಪ್ರದ ವೃತ್ತಿಜೀವನದ ಬುದ್ದಿವಂತಿಕೆಯನ್ನು ಲೇಖನಗಳಲ್ಲಿ ಹಂಚಿಕೊಂಡಿದ್ದಾರಲ್ಲದೆ, ಸಮಾಜದ ಬಗೆಗಿನ ಉತ್ತಮ ಭರವಸೆಯನ್ನು ಅಭಿವ್ಯಕ್ತಗೊಳಿಸಿದ್ದಾರೆ. ‘ರಾಜಮಾರ್ಗ’ ದ ಲೇಖನಗಳಲ್ಲಿ ಸಾಮಾಜಿಕ ಕಾಳಜಿಯನ್ನು ಅನಾವರಣಗೊಳಿಸುವ ಹಾಗೂ ಆಸಕ್ತಿಕರವಾದ ವಿಷಯಗಳು ಅಡಕಗೊಂಡಿದೆ. ಕೆ. ಜೈರಾಜ್ ಅವರು ತಮ್ಮ ಸಾರ್ವಜನಿಕ ಕಾಳಜಿಯನ್ನು ಮತ್ತು ಸಾಮಾಜಿಕ ಸಂಗತಿಗಳನ್ನು ಮನದಟ್ಟಾಗುವಂತೆ ಚಿತ್ರಿಸಿದ್ದಾರೆ. ಒಟ್ಟಾರೆ, ತಮ್ಮ ಆಡಳಿತ ಕಾಲದ ಹಲವಾರು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗುವಂತೆ ಈ ಕೃತಿಯಲ್ಲಿ ಕೆ. ಜೈರಾಜ್ ಕಟ್ಟಿಕೊಟ್ಟಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.