ಸಾಮಾಜಿಕ ಚಾರಿತ್ರಿಕ ಹಿನ್ನೆಲೆಯಲ್ಲಿ ಭಗವದ್ಗೀತೆಯನ್ನು ಪರಾಮರ್ಶಿಸುವ ಯತ್ನ ’ಗೀತೆ- ಒಳಗಿನ ಸತ್ಯ ಏನು?’ ಕೃತಿಯದ್ದು. ನಾರ್‍ಲ ವೆಂಕಟೇಶ್ವರರಾವ್ ಹಲವು ಮಗ್ಗುಲುಗಳಿಂದ ಗೀತೆಯನ್ನು ಮುರಿದು ಕಟ್ಟುವ ಯತ್ನ ಮಾಡಿದ್ದಾರೆ. ಇಂತಹ ಮಹತ್ವದ ಕೃತಿಯನ್ನು ಪ್ರೊ. ಬಿ. ಗಂಗಾಧರಮೂರ್ತಿ ಕನ್ನಡಕ್ಕೆ ತಂದಿದ್ದಾರೆ. ಕನ್ನಡದ ಹಿರಿಯ ಚಿಂತಕ ಡಾ. ಜಿ. ರಾಮಕೃಷ್ಣ ಕೃತಿಗೆ ಬೆನ್ನುಡಿ ಬರೆದಿದ್ದಾರೆ.
ನಾರ್‍ಲ ಅವರು ಪುಸ್ತಕದ ಮುನ್ನುಡಿಯಲ್ಲಿ ’ನಾನು ಹಲವಾರು ಕೃತಿಗಳನ್ನು ರಚಿಸಿದ್ದರೂ ಇದು ನನ್ನ ಅಧ್ಯಯನ ಸಾಧನೆಯಲ್ಲಿ ತೃಪ್ತಿ ತಂದ ಕೃತಿಯಾಗಿದೆ ಎಂಬ ಭಾವನೆ ನನಗಿದೆ. ಸ್ವಾತಂತ್ರ್ಯಪೂರ್ವ ಕಾಲಕ್ಕಿಂತಲೂ ಈಗ ನಾವು ಹೆಚ್ಚು ವಿಚಾರಶೂನ್ಯರಾಗಿದ್ದೇವೆ. ಮೂಢನಂಬಿಕೆಗಳ, ಕಟ್ಟಾ ಸಂಪ್ರದಾಯಿಕತೆಯ ಮತ್ತು ಬೂಟಾಟಿಕೆಯ ಬದುಕು ನಮ್ಮದು. ನನಗೀಗ 76. ಹೊರೆಹೊತ್ತ ಹೃದಯದ ಈ ಇಳಿವಯಸ್ಸಿನಲ್ಲಿ ನನಗೆ ಏಕಾಂಗಿತನ ಭಾಸವಾಗುತ್ತದೆ. ಏರುತ್ತಿರುವ ದೈತ್ಯಪ್ರಮಾಣದ ಪುನರುತ್ಥಾನವಾದಿ ಅಲೆಯನ್ನು ತಡೆಯಲು ನನ್ನ ಕೊನೆಗಾಲದಲ್ಲಿ ಸಮಾಜಕ್ಕೆ ಏನನ್ನಾದರೂ ನೀಡಲು ಸಾಧ್ಯವಾದೀತೆ? ಎಂಬ ನನ್ನ ಅಂತಃಸತ್ವದ ಬೇಗುದಿಯ ಪ್ರಶ್ನೆಗೆ ಈ ಕೃತಿಯು ಉತ್ತರ ರೂಪವಾಗಿ ಮೈದಳೆದಿದೆ. ಗೀತೆ ಹಾಗೂ ಓಬೀರಾಯನ ಕಾಲದ ಚಿಂತನೆಗಳನ್ನು ಎತ್ತಿ ಹಿಡಿಯುವ ವಿಶ್ವದ ಯಾವುದೇ ಧರ್ಮೀಯ ಸಾಹಿತ್ಯದ ಸಂಕೋಲೆಗಳಿಂದ ಮುಕ್ತರಾಗಿ ಹೊಸ ಪರಿಕಲ್ಪನೆಗಳನ್ನು ಹೊಸ ಮೌಲ್ಯಗಳನ್ನು ಮುನ್ನೆಲೆಗೆ ತರದಿದ್ದಲ್ಲಿ ನಮ್ಮ ತಾಯಿಯೂ ತೊಟ್ಟಲೂ ಭರವಸೆಯೂ ಭವಿಷ್ಯವೂ ಆಗಿರುವ ನಮ್ಮ ಭೂಮಿಯ ಮೇ೨ನ ಯೋಚಿಸಬಲ್ಲ ಪ್ರಾಣಿಯಾಗಿರುವ ಮಾನವನ ಬದುಕಷ್ಟೇ ಅಲ್ಲದೆ ಸಮಸ್ತ ಜೀವರಾಶಿಗಳೂ ಸರ್ವನಾಶವಾಗುತ್ತವೆ’ ಎಂದಿದ್ದಾರೆ.
©2024 Book Brahma Private Limited.