ಪುರಾತನ ಭಾರತೀಯ ಜೀವನ ವ್ಯವಸ್ಥೆಯಲ್ಲಿ ವಾನಪ್ರಸ್ಥ ಆಶ್ರಮ ಮಹತ್ವದ್ದಾಗಿದೆ. ಬದುಕಿನ ಎಲ್ಲ ಹಂತಗಳನ್ನು ಅನುಭವಿಸಿ, ದಂಪತಿಗಳು ಕಾಡು ಸೇರಿ ಅಲ್ಲಿನ ನಿಸರ್ಗದತ್ತ ಜೀವನವನ್ನು ಅನುಭವಿಸುವುದನ್ನು ನಾವು ವಾನಪ್ರಸ್ಥ ವ್ಯವಸ್ಥೆಯಲ್ಲಿ ಕಾಣಬಹುದು. ಪ್ರಾಚೀನ ಕಾಲದಲ್ಲಿ ದೇವಸ್ಥಾನಗಳು, ಪುಣ್ಯ ಕ್ಷೇತ್ರಗಳು ಎನ್ನುವುದು ಇರಲಿಲ್ಲ. ನದಿ ಮೂಲಗಳು, ಕಾಡು ಮೊದಲಾದ ಸ್ಥಳಗಳೇ ಪುಣ್ಯ ಸ್ಥಳಗಳಾಗಿದ್ದವು. ಲೇಖಕರು ಈ ಆಚರಣೆಗೆ ಒಂದು ಅರ್ಥಪೂರ್ಣ ವ್ಯಾಖ್ಯಾನವನ್ನು ಈ ಕೃತಿಯಲ್ಲಿ ನೀಡಿದ್ದಾರೆ. ಗಣೇಶ್ ದೇವಿ ಬರೋಡೆಯ ಸನಿಹದಲ್ಲಿರುವ ತೇಜಗಡ ಎಂಬ ಆದಿವಾಸಿ ಹಾಡಿಯಲ್ಲಿ ತಮ್ಮ ವಾನಪ್ರಸ್ಥವನ್ನು ಆರಂಭಿಸಿದರು. ಆದಿವಾಸಿಗಳ ಅಸ್ಮಿತೆಯ ವಿಕಾಸವೇ ಈಗ ದೇವಿಯವರ ಉಳಿದ ಬದುಕಿನ ಆಯುಷ್ಯವಾಗಿದೆ. ಆಧುನಿಕ ಮತ್ತು ಪ್ರಾಚೀನತೆಯ ನಡುವಿನ ಸಮನ್ವಯ, ಬಿಕ್ಕಟ್ಟು, ಸಂಘರ್ಷ ಇವೆಲ್ಲವನ್ನೂ ಅವರ ವಾನಪ್ರಸ್ಥದಲ್ಲಿ ನಾವು ಕಾಣಬಹುದು. ಸಂಶೋಧನೆ ಮತ್ತು ಸೃಜನಶೀಲತೆಯ ಒಂದು ಅಪೂರ್ವ ರಸಾಯನವು ಓದುಗನನ್ನು ಪುಲಕಿತಗೊಳಿಸುತ್ತದೆ. ಉಪಭಾಷೆ, ಗುಜರಾತ್ ದಂಗೆ, ಕಾಡಿನ ನಾಶ ಇವೆಲ್ಲವನ್ನು ಒಂದಕ್ಕೊಂದು ಜೋಡಿಸುತ್ತಾ ಹೋಗುವ ಅವರ ನಿರೂಪಣೆಯ ಕ್ರಮ ಕುತೂಹಲಕಾರಿಯಾದುದು. ಈ ಕೃತಿಯಲ್ಲಿ ಮೂರು ಅಧ್ಯಾಯಗಳಿವೆ. ಕಾಡು ಅವರ ಮನದೊಳಗಿನ ಅಭಿವ್ಯಕ್ತಿಯಾಗಿ ಸಹಜ ರೀತಿಯಲ್ಲಿ ಹೊರಹೊಮ್ಮುತ್ತದೆ. ಪರಂಪರೆ, ಆಧುನಿಕತೆ, ನಿಸರ್ಗ, ನಗರ ಇವುಗಳ ನಡುವಿನ ತಿಕ್ಕಾಟಗಳನ್ನು ಅವರ ವಾನಪ್ರಸ್ಥ ತೆರೆದಿಡುತ್ತದೆ. ಇದು ಸಂಶೋಧನಾತ್ಮಕ ಕೃತಿಯೂ ಹೌದು. ಸೃಜನಶೀಲ ಕೃತಿಯೂ ಹೌದು. ಕೃತಿಯನ್ನು ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
©2024 Book Brahma Private Limited.