ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನಿಗಿನಿಗಿ ಎನ್ನುವಂತಹ ಚಿಂತನೆಗಳನ್ನು ಹೊತ್ತ ಕೃತಿ ’ಭೀಮಯಾನ: ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆಗಳು’. ಕೇವಲ 104 ಪುಟಗಳ ಪುಟ್ಟ ಪುಸ್ತಕವನ್ನು ಚಿಂತಕಿ ಎಚ್.ಎಸ್. ಅನುಪಮಾ ಮತ್ತು ಕವಿ ಬಸವರಾಜ ಸೂಳಿಭಾವಿ ಕನ್ನಡಕ್ಕೆ ತಂದಿದ್ದಾರೆ. ಭಗವಾನ್ ದಾಸ್ ಸಂಪಾದಿಸಿರುವ ’ದಸ್ ಸ್ಪೋಕ್ ಅಂಬೇಡ್ಕರ್’ ಕೃತಿಯಿಂದಲೂ, ನಾನಕ್ ಚಂದ್ ರತ್ತೂ ಅವರ ’ದ ಲಾಸ್ಟ್ ಫ್ಯೂ ಇಯರ್ಸ್ ಆಫ್ ಅಂಬೇಡ್ಕರ್’ ಕೃತಿಯಿಂದಲೂ ಕೆಲವು ಅಪರೂಪದ ಚಿಂತನೆಗಳನ್ನು ಒಟ್ಟುಗೂಡಿಸಲಾಗಿದೆ. ಬಿಬಿಸಿ ಸಂದರ್ಶನದ ಕನ್ನಡರೂಪವೂ ಇಲ್ಲಿದೆ. ಅಂಬೇಡ್ಕರ್ ಅವರ ಪ್ರಖರ ಚಿಂತನೆಗಳಿಗೆ ಸಾಕ್ಷಿಯಾಗುವ ಮಾತೊಂದು ಕೃತಿಯಲ್ಲಿದೆ: '...ನೀವು ಹೇಳಿದಂತೆ ನಾನು ರಾಷ್ಟ್ರಕ್ಕೆ ಸಹಾಯವಾಗುವ, ದೇಶಭಕ್ತಿಯೆನಿಸುವ ಯಾವುದಾದರೂ ಸೇವೆಯನ್ನು ಸಲ್ಲಿಸಿದ್ದರೆ ಅದು ನನ್ನ ಅಕಳಂಕಿತ ಪ್ರಜ್ಞೆಯಿಂದಲೇ ಹೊರತು ದೇಶಭಕ್ತಿಯಿಂದಲ್ಲ. ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ನನ್ನ ಜನರಿಗೆ ಮಾನವ ಹಕ್ಕುಗಳನ್ನು ಕೊಡಿಸಲು ಹೋರಾಡುವಾಗ ಈ ದೇಶಕ್ಕೆ ಅಪಕಾರವಾಗಿದ್ದರೆ ಅದು ಪಾಪವಲ್ಲ. ಅದರಿಂದ ಈ ದೇಶಕ್ಕೇನಾದರೂ ಹಾನಿಯಾಗಿದ್ದರೆ ಅದು ಪ್ರಜ್ಞಾಪೂರ್ವಕವಲ್ಲ. ನನ್ನ ಜನರ ನಾಗರಿಕ ಹಕ್ಕುಗಳಿಗೆ ಹೋರಾಡುವಾಗ ಈ ದೇಶಕ್ಕೆ ಹಾನಿ ಮಾಡದೇ ಹೋರಾಡಲು ನನ್ನ ಪ್ರಜ್ಞೆ ಪ್ರೇರೇಪಿಸಿದೆ.'
ಲೇಖಕ ಅರುಣ್ ಜೋಳದಕೂಡ್ಲಿಗಿ ಅವರು ಕೃತಿ ಕುರಿತು ಬರೆದ ಆನ್‌ಲೈನ್ ಟಿಪ್ಪಣಿಯೊಂದರಲ್ಲಿ ’ಅಂಬೇಡ್ಕರ್ ಅವರನ್ನು ಪ್ರವೇಶಿಸುವ ಮೊದಲ ಓದುಗರಿಗೆ ಈ ಕೃತಿ ತುಂಬಾ ಪರಿಣಾಮಕಾರಿಯಾಗಿ ಅವರನ್ನು ದಾಟಿಸುತ್ತದೆ. ಆ ಕಾರಣಕ್ಕಾಗಿ ಈ ಪುಸ್ತಕ ಮಹತ್ವವನ್ನು ಪಡೆದಿದೆ. ಜನಪರ ಚಳವಳಿಗೆ ಬೇಕಾಗುವ ಪ್ರಗತಿಪರ ಆಲೋಚನೆಗಳನ್ನು ಪ್ರಕಟಿಸುತ್ತಾ ಬಂದಿರುವ ಲಡಾಯಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಇದೊಂದು ಒಳ್ಳೆಯ ಕೆಲಸ. ಅನುವಾದಿಸಿ ಸಂಪಾದಿಸಿರುವ ಎಚ್. ಎಸ್. ಅನುಪಮಾ, ಬಸೂ ಅವರದು ಉತ್ತಮ ಪ್ರಯತ್ನ’ ಎಂದಿದ್ದಾರೆ.
ಭೀಮಯಾನ – ಅಂಬೇಡ್ಕರ್ ಅವರ ಪ್ರಖರ ಚಿಂತನೆಗಳ ಕಟ್ಟು : ಪುಸ್ತಕ ಓದು
--
(ಹೊಸತು, ಸಪ್ಟೆಂಬರ್ 2012, ಪುಸ್ತಕದಪ ಪರಿಚಯ)
ಅಸ್ಪೃಶ್ಯತೆ - ಅಸಮಾನತೆ - ಜಾತಿ ವ್ಯವಸ್ಥೆಗಳನ್ನು ತೊಡೆದುಹಾಕಲು ಡಾ|| ಬಿ. ಆರ್. ಅಂಬೇಡ್ಕರ್ ಅವರಷ್ಟು ಶ್ರಮಿಸಿದ ಪ್ರಜ್ಞಾವಂತ, ಧೀರೋದಾತ್ತ ನಾಯಕ ಬೇರೊಬ್ಬರಿರಲಾರರು. ಸ್ವತಃ ತಾವು ಅನುಭವಿಸಿದ ಅಸ್ಪೃಶ್ಯತೆಯ ಅವಮಾನ ಬದುಕಿನಲ್ಲಿ ಅವರಿಗೆ ತುಂಬ ನೋವು ಕೊಟ್ಟಿತ್ತು. ಬಾಯಾರಿದಾಗ ಕೆರೆ-ಬಾವಿಗಳ ನೀರನ್ನು ಮುಟ್ಟಿ ಕುಡಿಯುವುದು ಅಪರಾಧವೆಂದು ಪರಿಗಣಿಸುವ, ಮನುಷ್ಯರನ್ನು ಮುಟ್ಟಿದರೆ ಮೈಲಿಗೆಯೆಂದು ಬೊಬ್ಬಿರಿಯುವ ಸವರ್ಣಿಯ ಮನಸ್ಸುಗಳು ಎಷ್ಟು ಮಲಿನವೆಂದು ಅವರು ಮನಗಂಡಿದ್ದರು. ಬ್ರಿಟಿಷರ ಆಡಳಿತಕಾಲದಲ್ಲಿ ಶಿಕ್ಷಣ ದೊರೆತು ಸುಧಾರಣೆಗಳಾಗಿ ಇಂಥ ಅನಿಷ್ಟ ಸಂಪ್ರದಾಯಗಳನ್ನು ಕಾನೂನಿನ ಮೂಲಕ ಸರಿಪಡಿಸುವ ಪ್ರಯತ್ನಗಳಾದವು. ಅಂಬೇಡ್ಕರ್ ಉಚ್ಚಶಿಕ್ಷಣ ಪಡೆದು ಇಂಗ್ಲೆಂಡ್‌ಗೆ ತೆರಳಿ ಬ್ಯಾರಿಸ್ಟರ್ ಆಗಿ ಮರಳಿ ತನ್ನ ದೇಶದಲ್ಲಿ ಸಮಾನತೆಗಾಗಿ ಹೋರಾಡಿದರು. ಆದರೆ ಭಾರತ ಶತಶತಮಾನಗಳಿಂದ ಚಾತುರ್ವಣ್ಯ್ರ ವ್ಯವಸ್ಥೆಯನ್ನೇ ಬಲವಾಗಿ ನಂಬಿ ಅದನ್ನು ಇನ್ನಷ್ಟು ಭದ್ರಪಡಿಸಲು ಟೊಂಕಕಟ್ಟಿ ನಿಂತಿತ್ತು. ತೇಪೆ ಹಚ್ಚುವಂತಹ ಸುಧಾರಣೆಗಳನ್ನು ಅವರು ವಿರೋಧಿಸಿದ್ದರು. ಒಂದು ಕ್ಷಣ ದೇವಾಲಯದ ಒಳಹೊಕ್ಕು ಬಂದರೆ, ಒಂದು ಹೊತ್ತಿನ ಸಹಭೋಜನ ಮಾಡಿದರೆ ಜಾತಿಗಳು ಶಾಶ್ವತವಾಗಿ ಅಳಿಯುವುದಿಲ್ಲ; ಹರಿಜನೋದ್ದಾರದಂತಹ ಕಾರ್ಯಕ್ರಮಗಳು ನಮಗೆ ಸಮಾನತೆ ತಂದುಕೊಡುವುದಿಲ್ಲ ಎಂದು ಅವರು ಗುಡುಗಿದ್ದರು. ಆಮೂಲಾಗ್ರ ಮೂಲಭೂತ ಬದಲಾವಣೆಯನ್ನು ಬಯಸಿದ್ದ ಅಂಬೇಡ್ಕರ್ ಚಿಂತನೆಗಳು ಇಲ್ಲಿವೆ. ಇಲ್ಲಿನ 'ಬಿಬಿಸಿ ಸಂದರ್ಶನ' ಮತ್ತು 'ಕೊನೆಯ ಪ್ರಾರ್ಥನೆ' ಎಂಬ ಲೇಖನಗಳು ಓದಲೇ ಬೇಕಾದಂಥವು.
©2024 Book Brahma Private Limited.