‘ಅಧಿಕಾರ ಮೀಮಾಂಸೆ’ ಕೃತಿಯು ಪಿ.ವಿ ನಾರಾಯಣ ಅವರ ಅನುವಾದಿತ ಲೇಖನಗಳ ಸಂಕಲನ. ಕೃತಿಯ ಮೂಲ ಲೇಖಕ ಬಟ್ರಂಡ್ ರಸೆಲ್. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಅಧಿಕಾರ ಹಾಗೂ ಅಧಿಕಾರಕ್ಕೆ ಸಂಬಂಧಿಸಿದ ಸ್ಪರ್ಧೆ, ರಾಜಕಾರಣ, ಸರ್ಕಾರ, ಹಣಕಾಸು ವಿಚಾರಗಳು, ನೈತಿಕತೆ ಸೇರಿದಂತೆ ಹಲವು ಸಂಗತಿಗಳನ್ನು ರಸೆಲ್ ತಮ್ಮ ಕೃತಿಯಲ್ಲಿ ಚಿಂತಿಸಿದ್ದಾರೆ. ಈ ಕೃತಿ ಅಧಿಕಾರದ ಬಗೆಗಿನ ಓದುಗರ ಪೂರ್ವನಿರ್ಧಾರಿತ ಪರಿಕಲ್ಪನೆಗಳನ್ನು ಬುಡಮೇಲು ಮಾಡುತ್ತದಲ್ಲದೆ, ಅನೇಕ ಸಂಗತಿಗಳೊಂದಿಗೆ ತಳುಕು ಹಾಕಿಕೊಂಡ ಅಧಿಕಾರದ ವಿರಾಟ್ ಸ್ವರೂಪ ಸಹೃದಯರನ್ನು ಬೆಚ್ಚಿಬೀಳಿಸುತ್ತದೆ. ಕಾಲದೇಶಗಳ ಚೌಕಟ್ಟನ್ನು ಮೀರಿ ಸಾರ್ವತ್ರಿಕ ಗುಣ ಹೊಂದಿರುವುದು ರಸೆಲ್ ಚಿಂತನೆಗಳ ಬಹುಮುಖ್ಯ ಗುಣ. ರಸೆಲ್ಲರ ಚಿಂತನಾಕ್ರಮವನ್ನು ಅರಿಯುವ ಹಾಗೂ ಆತನ ವ್ಯಾಪಕ ಅಧ್ಯಯನದ ಆಳ ಅಗಲಗಳನ್ನು ಸೂಚಿಸುವ ಕೃತಿಯಂತೆಯೂ ಮುಖ್ಯವೆನ್ನಿಸುವ `ಅಧಿಕಾರ ಮೀಮಾಂಸೆ‘ ಕನ್ನಡದ ಮೂಲಕವೇ ಜಗತ್ತನ್ನು ಒಳಗೊಳ್ಳುವ ಓದುಗರಿಗೆ ಅತಿ ಉಪಯುಕ್ತ ಎನ್ನಿಸುವ ಪುಸ್ತಕ. ರಸೆಲ್ ಚಿಂತನೆಗಳು ಪ್ರತಿ ಓದಿಗೂ ಬೇರೆಬೇರೆ ಅರ್ಥಗಳನ್ನು ಬಿಟ್ಟುಕೊಡುವ ಶಕ್ತಿ ಹೊಂದಿವೆ. ಇಂತಹ ಸಂಕೀರ್ಣ ಸಂಗತಿಗಳನ್ನು ಪಿ.ವಿ.ಎನ್. ಅವರು ಸರಳವಾಗಿ ಹಾಗೂ ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ. ಹಲವು ವೇಳೆ ಬ್ರಿಟಿಷ್ ತತ್ವಜ್ಞಾನಿ ರಸೆಲ್ ಕನ್ನಡದವನೋ ಅಥವಾ ಭಾರತೀಯನೋ ಅನ್ನಿಸಲಿಕ್ಕೆ ಅನುವಾದದಲ್ಲಿನ ಕಸುವೇ ಕಾರಣ ಎಂದಿದೆ.
ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...
READ MORE