‘ಬುದ್ಧಿ ಭ್ರಮಣೆ ಮನೋವೈಜ್ಞಾನಿಕ ನೆಲೆಯಲ್ಲಿ’ ಬ್ರಿಟಿಷ್ ವೈದ್ಯ, ಮನೋವಿಜ್ಞಾನಿ ಬರ್ನಾರ್ಡ್ ಹಾರ್ಟ್ ಅವರ ಕೃತಿಯ ಕನ್ನಡಾನುವಾದ. ಭಾಷಾಶಾಸ್ತ್ರಜ್ಞ, ಲೇಖಕ ಕೆ.ವಿ. ತಿರುಮಲೇಶ್ ಅವರು ಈ ಕೃತಿಯನ್ನು ಕನ್ನಡೀಕರಿಸಿದ್ದಾರೆ.
ಬರ್ನಾರ್ಡ್ ಹಾರ್ಟ್ ಎಂಬ ಬ್ರಿಟಿಷ್ ವೈದ್ಯ, ಮನೋವಿಜ್ಞಾನಿ ಹಾಗೂ ಪ್ರಾಧ್ಯಾಪಕ 1912ರಲ್ಲಿ The Psychology of Insanity ಎಂಬ ಕಿರು ಹೊತ್ತಗೆಯೊಂದನ್ನು ಬರೆದರು; ಅದು ತುಂಬಾ ಜನಪ್ರಿಯವಾಗಿ ಮುಂದಿನ ವರ್ಷಗಳಲ್ಲಿ ಹೊಸ ಆವೃತ್ತಿಗಳನ್ನೂ ಮರುಮುದ್ರಣಗಳನ್ನೂ ಕಂಡಿತು. ಈ ಮಧ್ಯೆ ಇನ್ನೂ ಎಳವೆಯಲ್ಲಿದ್ದ ಮನೋವಿಜ್ಞಾನ ಶೀಘ್ರಗತಿಯಿಂದ ಬೆಳೆಯುತ್ತಲೇ ಇತ್ತು. 1930ರಲ್ಲಿ ಬರ್ನಾರ್ಡ್ ಹಾರ್ಟ್ ಈ ಕೃತಿಯ ನಾಲ್ಕನೆಯ ಆವೃತ್ತಿಯನ್ನು ರಚಿಸಿದರು. ಮನೋವಿಜ್ಞಾನ ಇನ್ನೂ ಬೆಳೆಯುತ್ತಲೇ ಇದೆ; ಇಂಥ ಜ್ಞಾನಶಾಖೆಗೆ ಕೊನೆಯೆಂಬುದು ಇಲ್ಲ. ಆದ್ದರಿಂದ ಯಾವ ಪುಸ್ತಕವೂ ಸಂಪೂರ್ಣ ಎನ್ನುವಂತಿಲ್ಲ. ಹಾರ್ಟ್ ಅವರ ಪುಸ್ತಕ ಈ ಕ್ಷೇತ್ರದಲ್ಲಿ ಒಂದು ಆರಂಭದ ಪ್ರಯತ್ನ, ಒಂದು ಅವತರಿಣಿಕೆ, ಬುದ್ಧಿಭ್ರಮಣೆ ಅರ್ಥಾತ್ ಹುಚ್ಚು ಎಂದರೆ ಏನು ಎನ್ನುವುದನ್ನು ತಮ್ಮ ಕಾಲದ ಮನೋವೈಜ್ಞಾನಿಕ ದೃಷ್ಟಿಯಿಂದ ಅವರು ಇಲ್ಲಿ ವಿವರಿಸಿದ್ದಾರೆ. ಜೊತೆಗೆ ಬುದ್ಧಿಭ್ರಮಣೆಯ ಕುರಿತಾಗಿ ಜನಸಾಮಾನ್ಯರಿಗೆ ಇರಬಹುದಾದ ತಪ್ಪು ಗ್ರಹಿಕೆಗಳನ್ನು ನೀಗಿಸಲು ಶ್ರಮಿಸಿದ್ದಾರೆ. ಈ ಕ್ಷೇತ್ರ ಇಂದೀಗ ಆಳವಾಗಿಯೂ ಬೆಳೆದಿರಬಹುದು; ಇಂಥ ಬೆಳವಣಿಗೆಗೆ ಹಾರ್ಟ್ ಅವರಂಥವರ ಕೊಡುಗೆಯೂ ಇದೆ.
“ಬುದ್ಧಿಭ್ರಮಣೆ: ಮನೋವೈಜ್ಞಾನಿಕ ದೃಷ್ಟಿಯಲಿ' ಹೆಸರಿನಲ್ಲಿ ಇಲ್ಲಿ ಕನ್ನಡಕ್ಕೆ ಅನುವಾದಿಸಿರುವುದು The Psyce of Insanityಯ ನಾಲ್ಕನೆಯ ಆವೃತ್ತಿಯ ಪಠ್ಯವನ್ನು, ಹಾರ್ಟ್ ಅವರು ಬರೆದ ಮುನ್ನುಡಿಯನ್ನೂ ಅನುವಾದಿಸಲಾಗಿದೆ. ಈ ಪುಸ್ತಕವನ್ನು ಓದುವಾಗ ಪಾರಿಭಾಷಿಕ ಪದ ಕಾರಣ ಆರಂಭದಲ್ಲಿ ಕೆಲವರಿಗೆ ಸ್ವಲ್ಪ ತೊಡಕಾಗಬಹುದು; ಆದರೆ ಓದುತ್ತ ಹೋದಂತೆ ಈ ಪದಗಳ ಅರ್ಥ ಸ್ವಯಂವೇದ್ಯವಾಗುತ್ತದೆ.
©2024 Book Brahma Private Limited.