ತಮಿಳು ಲೇಖಕ ವಿಡುದಿ ರಾಜೇಂದ್ರನ್ ಅವರು ಬರೆದಿರುವ ಕೃತಿ ಇದಾಗಿದ್ದು, ಇದನ್ನು ಕಲೈ ಸೆಲ್ವಿ ಅಗಸ್ಯ ಕನ್ನಡಕ್ಕೆ ಅನುವಾದಿಸಿದ್ದಾರೆ. ಸಂಘಪರಿವಾರವೆನ್ನುವುದು ತಕ್ಷಣದ ಅಗತ್ಯಕ್ಕಾಗಿ ನಿನ್ನೆ ಮೊನ್ನೆ ರೂಪುಗೊಂಡ ಸಂಘಟನೆಯಲ್ಲ. ಅದಕ್ಕೊಂದು ಸುದೀರ್ಘ ಇತಿಹಾಸವಿದೆ ಮತ್ತು ಆ ಇತಿಹಾಸವನ್ನು ನಾವು ಅರಿತು ಕೊಳ್ಳದೇ ವರ್ತಮಾನದಲ್ಲಿ ಅದು ಒಡ್ಡುತ್ತಿರುವ ಸವಾಲನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅದನ್ನು ಎದುರಿಸುವುದು ತುಂಬಾ ಕಷ್ಟವಾಗಿದೆ. ಸಂಘಪರಿವಾರ ಎನ್ನುವುದು ಒಂದು ಸಂಚು. ಅದು ಮುಸ್ಲಿಮ್, ಕ್ರೈಸ್ತರ ವಿರೋಧಿಯಂತೆ ಮೇಲುನೋಟಕ್ಕೆ ನಟಿಸುತ್ತದೆಯಾದರೂ, ಸ್ವಾತಂತ್ರ್ಯೋತ್ತರ ಭಾರತದ ಸಂದರ್ಭದಲ್ಲಿ ವೈದಿಕ ಶಾಹಿ ಎದುರಿಸಬಹುದಾದ ಸವಾಲುಗಳನ್ನು ಮೊದಲೇ ಊಹಿಸಿ ಸ್ವಾತಂತ್ರ ಪೂರ್ವದಲ್ಲಿ ಮಾಡಿಕೊಂಡ ಸಿದ್ದತೆಯಾಗಿದೆ. ಸುಳ್ಳು, ಮೋಸ, ಭ್ರಮೆಗಳ ತಳಹದಿಯ ಮೇಲೆ ಸಂಘಪರಿವಾರ ತನ್ನ ಮಹಲನ್ನು ಕಟ್ಟಿಕೊಂಡಿದೆ. ಈ ಕೃತಿಯಲ್ಲಿ ಸಂಘಪರಿವಾರದ ಇತಿಹಾಸ ಮತ್ತು ಅದು ಭಾರತದಲ್ಲಿ ಹಂತಹಂತವಾಗಿ ಹೇಗೆ ಬೆಳೆಯಿತು ಎನ್ನುವುದನ್ನು ವಿಶ್ಲೇಷಿಸಲಾಗಿದೆ. ಸಂಘಪರಿವಾರದ ಹಿನ್ನೆಲೆ, ಇತಿಹಾಸ, ಸ್ವಾತಂತ್ರ ಹೋರಾಟದ ಕಾಲದಿಂದ ಹಿಡಿದು ಈವರೆಗೆ ಅದು ನಡೆಸಿದ ರಹಸ್ಯ ಕಾರ್ಯಾಚರಣೆಗಳು ಮತ್ತು ರಾಜಕೀಯ ಕುಟಿಲತೆಗಳ ಬಗ್ಗೆ ಆಧಾರಸಹಿತವಾಗಿ ಈ ಕೃತಿ ತೆರೆದಿಡುತ್ತದೆ. ಸಂಘಪರಿವಾರದ ಚರಿತ್ರೆಯನ್ನು ಯುವ ಸಮುದಾಯಕ್ಕೆ ತಿಳಿಸಿಕೊಡುವ ಉದ್ದೇಶದಿಂದ ಒಟ್ರುಮ್ಮೆ ಪಾಕ್ಷಿಕದಲ್ಲಿ ಬರೆದ ಅಂಕಣಗಳ ಸಂಗ್ರಹವಾಗಿದ್ದು, ಇಲ್ಲಿ ಒಟ್ಟು 16 ಲೇಖನಗಳಿವೆ. ದಕ್ಷಿಣ ಭಾರತದಲ್ಲಿ ಸಂಘಪರಿವಾರದ ಇತಿಹಾಸವನ್ನು ಹೇಳುವ ದ್ರಾವಿಡ ನಾಡಿನಲ್ಲಿ ಆರೆಸ್ಸೆಸ್ ಕರಿನೆರಳು ಲೇಖನದಿಂದ ಹಿಡಿದು ಗೋಡೈ ಆರೆಸ್ಸೆಸ್ ಸದಸ್ಯನೇ ಎನ್ನುವುದನ್ನು ಚರ್ಚಿಸುವವರೆಗೆ ಸಂಘಪರಿವಾರ ಮೇಲೆ ಮತ್ತು ಒಳಮ್ಮೆಯನ್ನು ಮುಟ್ಟುವ ಮಹತ್ವದ ಲೇಖನಗಳಿವೆ. ಸಂಘಪರಿವಾರದ ನಿಜವಾದ ಮುಖದ ಬಗ್ಗೆ ಲೇಖಕರು ವಿವರಣೆಯನ್ನು ನೀಡಿದ್ದಾರೆ.
©2024 Book Brahma Private Limited.