ರಾಮಾಯಣದಲ್ಲಿ ರಾಮ ನಾಯಕನಾದರೆ ರಾವಣ ಪ್ರತಿನಾಯಕ. ಪೂರ್ಣ ಪ್ರಮಾಣದಲ್ಲಿ ಆತನನ್ನು ಖಳನನ್ನಾಗಿಸಲು ಸಾಧ್ಯವಿಲ್ಲ. ಭಾರತದ ಎಷ್ಟೋ ಕಡೆ ರಾವಣನನ್ನು ಆರಾಧಿಸುವ ಜನ ಸಮೂಹವನ್ನು ಕಾಣಬಹುದು. ಕರ್ನಾಟಕದಲ್ಲಿಯೇ ಲಂಕೇಶ ಎನ್ನುವ ಹೆಸರನ್ನು ಹೊಂದಿದ ಅದೆಷ್ಟೋ ಮಂದಿ ಇದ್ದಾರೆ. ರಾವಣನ ಮೇಲಿರುವ ಪ್ರೀತಿಯೇ ಭಾರತದ ಅನೇಕ ಕಡೆ ಹೋಳಿ ಆಚರಿಸದಿರಲು ಕಾರಣ ಎಂಬ ಮಾತುಗಳಿವೆ. ಹಾಗಾದರೆ ರಾವಣ ಮಹಾತ್ಮನೇ? ಮಹಾತ್ಮನಾಗುವಂತಹ ಗುಣಗಳು ಆತನಲ್ಲಿ ಏನೇನು ಇದ್ದವು ಎಂಬುದನ್ನು 'ರಾವಣ-ಮಹಾತ್ಮನೋ ರಾಕ್ಷಸನೋ' ಕೃತಿಯಲ್ಲಿ ಚಿಂತಕ ಎಲ್.ಆರ್. ಬಾಲಿ ಚರ್ಚಿಸಿದ್ದಾರೆ. ಕೃತಿಯನ್ನು ಅನಿಲ ಹೊಸಮನಿ ಅವರು ಕನ್ನಡಕ್ಕೆ ತಂದಿದ್ದಾರೆ.
ಭಾರತ ವೈವಿಧ್ಯಮಯ ದೇಶ. ಇಲ್ಲಿರುವುದು ಒಂದು ರಾಮಾಯಣವಲ್ಲ. ಪ್ರತಿಯೊಂದು ರಾಮಾಯಣದಲ್ಲೂ ರಾಮನ ಕುರಿತೇ ಹಲವು ವ್ಯಾಖ್ಯಾನಗಳಿವೆ. ಕೆಲವು ಕಡೆ ಸೀತೆ ರಾಮನ ಸಹೋದರಿಯಾಗಿದ್ದಳು ಎಂಬ ಮಾತುಗಳಿದ್ದರೆ ರಾಮ ಏಕಪತ್ನಿ ವ್ರತಸ್ಥನಲ್ಲ ಎನ್ನುವ ಇನ್ನೊಂದಿಷ್ಟು ರಾಮಾಯಣಗಳನ್ನು ಕಾಣಬಹುದು. ರಾಮಾಯಣಕ್ಕಿಂತಲೂ ಸೀತಾಯಣ ಮುಖ್ಯ ಎನ್ನುವ ಸ್ತ್ರೀವಾದಿ ಕಥನಗಳಿವೆ. ಹಾಗೆಯೇ ನೂರಾರು ರಾವಣರೂ ಇದ್ದಾರೆ. ಆತನು ಖಳನೋ, ಪ್ರತಿನಾಯಕನೋ ಅಥವಾ ನಿಜವಾಗಿಯೂ ಆತನೇ ನಾಯಕನೋ ಎಂಬ ಜಿಜ್ಞಾಸೆಗಳಿವೆ. ಇನ್ನು ರಾವಣ ಸೇರಿದಂತೆ ಅಸುರರು ಭಾರತದ ಮೂಲನಿವಾಸಿಗಳು. ಆರ್ಯರು ಅವರ ಮೇಲೆ ದಾಳಿ ಮಾಡಿದರು. ಇದು ಮುಂದೆ ರಾಮಾಯಣದಂತಹ ಕಥನಗಳು ಹುಟ್ಟಿ ರಾಮ ಮಾತ್ರ ಗೆದ್ದು ರಾವಣನಂತಹವರು ಸೋಲೊಪ್ಪುವ ಕಥನವಾಯಿತು ಎಂಬ ಮಾತುಗಳಿಗೆ ಲೆಕ್ಕವಿಲ್ಲ.
ಕೃತಿ ರಾವಣನ ಗುಣಗಳನ್ನು ಎತ್ತಿ ಹಿಡಿಯುತ್ತದೆ. ಇದಕ್ಕಾಗಿ ವಾಲ್ಮೀಕಿ ರಾಮಾಯಣವನ್ನೇ ಉದಾಹರಣೆಯಾಗಿ ಬಳಸುತ್ತದೆ. ರಾವಣನನ್ನು ವಿಚಿತ್ರವಾಗಿ ಚಿತ್ರಿಸಿರುವ ಒಳಸಂಚುಗಳನ್ನು ಬಯಲು ಮಾಡುತ್ತದೆ. ಸಂಸ್ಕೃತಿಯ ಬಹುರೂಪವನ್ನು, ವಿವಿಧ ಮುಖಗಳನ್ನು ಅರ್ಥ ಮಾಡಿಕೊಳ್ಳಲು, ಹೊಸ ಚಿಂತನೆಗಳಿಗೆ ಓದುಗರು ತೆರೆದುಕೊಳ್ಳಲು ಕೃತಿ ಸಹಾಯ ಮಾಡುತ್ತದೆ.
©2024 Book Brahma Private Limited.