‘ಮನೆ ಕೆಲಸ ಮತ್ತು ಹೊರಗಿನ ಕೆಲಸ’ ಲೇಖಕಿ ರಂಗನಾಯಕಮ್ಮ ಅವರ ತೆಲುಗು ಕೃತಿಯನ್ನು ಬಿ. ಸುಜ್ಞಾನಮೂರ್ತಿ ಕನ್ನಡೀಕರಿಸಿದ್ದಾರೆ. ಮಾನವ ಸಮಾಜದಲ್ಲಿ ಕೆಲಸಗಳ ವಿಂಗಡಣೆ ಇದೆ. ಅದು ಮನೆಯ ಕೆಲಸ ಇರಬಹುದು, ಹೊರಗಿನ ಕೆಲಸ ಇರಬಹುದು. ಅದರ ಹಾಗೆಯೇ ಕೆಲಸ ಮಾಡಿಸುವವರು ಮತ್ತು ಕೆಲಸ ಮಾಡುವವರು ಈ ವಿಂಗಡಣೆಯ ಆಧಾರದಲ್ಲಿ ಬಡವ-ಬಲ್ಲಿದ ಮತ್ತು ಹೆಂಗಸು-ಗಂಡಸಿನ ವಿಂಗಡಣೆ ಕೂಡಾ ನಡೆದಿದೆ. ಹೆಣ್ಣಿಗೂ-ಗಂಡಿಗೂ ಇರುವ ವ್ಯತ್ಯಾಸವನ್ನು ಜನಪ್ರಿಯವಾಗಿ ಜೈವಿಕ ವ್ಯತ್ಯಾಸದ ನೆಲೆಯಲ್ಲಿ ವಿವರಿಸುವ ಕ್ರಮವಿದೆ. ಅದು ಅತ್ಯಂತ ಸಾಂಪ್ರದಾಯಿಕವಾದುದು, ಯಾಂತ್ರಿಕವಾದುದು. ಮನೆಯ ಕೆಲಸವನ್ನು ಮಹಿಳೆಯರೂ, ಹೊರಗಿನ ಕೆಲಸವನ್ನು ಗಂಡಸರೂ ಮಾಡುವಂತೆ ವಿಭಾಗ ಮಾಡಿ ಒಪ್ಪಿಸಿರುವುದೇ ಮಹಿಳಾ ಸಮಸ್ಯೆಗೆ ಮೂಲ ಕಾರಣ ಎಂಬ ಮಹತ್ವದ ಅಂಶವನ್ನು ಈ ಕೃತಿ ಪ್ರತಿಪಾದನೆ ಮಾಡುತ್ತದೆ. ಯಾಕೆಂದರೆ ಮನೆ ಕೆಲಸಕ್ಕೆ ಸಂಬಳವೂ ಇಲ್ಲ, ಕೂಲಿಯೂ ಇಲ್ಲ. ಇದು ಉತ್ಪಾದಕ ಕೆಲಸವೂ ಅಲ್ಲ, ಅನುತ್ಪಾದಕ ಕೆಲಸವೂ ಅಲ್ಲ. ಮನೆ ಹೊರಗಿನ ಕೆಲಸಕ್ಕೆ ಸಂಬಳವಿದೆ, ಕೂಲಿ ಇದೆ. ಅದು ಕಣ್ಣಿಗೆ ಕಾಣುತ್ತದೆ. ಆದರೆ ಮನೆ ಕೆಲಸಕ್ಕೆ ಸಂಬಳವಿಲ್ಲ, ಕೂಲಿ ಇಲ್ಲ; ಮಾತ್ರವಲ್ಲ; ಇದು ಕಣ್ಣಿಗೆ ಕಾಣಿಸುವುದೇ ಇಲ್ಲ. ಹೆಂಗಸರು ಗರ್ಭ ಧರಿಸಿದ ಕಾಲಾವಧಿ, ಬಾಣಂತಿಯರಾದ ಸಮಯ, ಒಂದು ಕಡೆ ಮಕ್ಕಳು-ಮೊಮ್ಮಕ್ಕಳು, ಇನ್ನೊಂದು ಕಡೆ ಅಪ್ಪ-ಅಮ್ಮ-ಅತ್ತೆ-ಮಾವ-ಇವರ ಲಾಲನೆ, ಪಾಲನೆ, ಪೋಷಣೆ ಸಂಪೂರ್ಣ ಹೆಂಗಸರದ್ದು. ಇದಕ್ಕೆ ಅದೆಂತಹ ತಾಳ್ಮೆ ಬೇಕು, ಎಂತಹ ವ್ಯವಧಾನ ಬೇಕು. ಈ ಕೆಲಸವನ್ನು ಕಣ್ಣಿನಲ್ಲಿ, ಕರುಳಿನಲ್ಲಿ, ಹೃದಯದಲ್ಲಿ ಮಾಡಬೇಕಾಗುತ್ತದೆ. ಗಂಡಸು ಹೊರಗಡೆ ಕಲ್ಲು ಬಂಡೆಗಳನ್ನು ಒಡೆಯುವುದು ಅತ್ಯಂತ ಶ್ರಮದಾಯಕ ಕೆಲಸ ಎಂದು ಎಲ್ಲರಿಗೂ ಅನಿಸುತ್ತದೆ. ಆದರೆ ತೊಟ್ಟಿಲಲ್ಲಿರುವ ಮುದ್ದು ಕಂದಮ್ಮನನ್ನು ಪಾಲನೆ ಪೋಷಣೆ ಮಾಡುವುದು ಅದಕ್ಕಿಂತ ಜಟಿಲ. ಇದಕ್ಕೆ ಎಷ್ಟು ಸಂಬಳ ಕೊಡಬೇಕು, ಎಷ್ಟು ಕೂಲಿ ಕೊಡಬೇಕು? ಈ ಮಹತ್ವದ ಪ್ರಶ್ನೆಗಳನ್ನು ಈ ಕೃತಿ ಎತ್ತುತ್ತದೆ.
©2024 Book Brahma Private Limited.