‘ಜಗತ್ ಕಥಾವಲ್ಲರಿ’ ಕೃತಿಯು ಪಂಡಿತ ಜವಾಹರಲಾಲ್ ನೆಹರು ಅವರು ಬರೆದ ಬರಹಗಳ ಸಂಕಲನವಾಗಿದ್ದು, ಖ್ಯಾತ ಹಿರಿಯ ಸಾಹಿತಿ ಡಾ. ಸಿದ್ಧವನಹಳ್ಳಿ ಕೃಷ್ಣಶರ್ಮ ಕನ್ನಡಕ್ಕೆ ಅನುವಾಧಿಸಿದ್ದಾರೆ. ಮುಖ್ಯವಾಗಿ ನೆಹರು ಅವರು ಬರೆದ ಪತ್ರಗಳ ಗುಚ್ಛವಿದು. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ‘ಜಗತ್ಕಥಾವಲ್ಲರಿ` ಬರೀ ಇತಿಹಾಸದ ಪುರಾಣವಲ್ಲ. ಜವಾಹರಲಾಲರ ವ್ಯಕ್ತಿತ್ವದ ಪ್ರತಿಬಿಂಬ. ಅದರ ಸರಳತೆ, ಸ್ಪಷ್ಟತೆ ಸಾಟಿಯಿಲ್ಲದ್ದು. ವಿಷಯದ ಹಿಡಿತ ಗಾಢವಾಗಿದ್ದು, ಎಲ್ಲೂ ಅಳ್ಳಕವಾಗಿಲ್ಲ. ಇದು ಇಂಗ್ಲೀಷ್ ಪುಸ್ತಕದ ಅರ್ಧ ಭಾಗ, ಇನ್ನರ್ಧ ಭಾಗ ಇನ್ನೊಂದು ಸಂಪುಟವಾಗಿ ಬೇಗ ಪ್ರಕಟವಾದೀತೆಂದು ಆಶಿಸಿದ್ದೇನೆ ಎನ್ನುತ್ತಾರೆ ಅನುವಾದಕ ಸಿದ್ದವನಹಳ್ಳಿ ಕೃಷ್ಣಶರ್ಮ. `ಈ ಪತ್ರಗುಚ್ಛ ಯಾವಾಗ ಪ್ರಕಟವಾದೀತೋ, ಹೇಗೆ ಪ್ರಕಟವಾದೀತೋ, ಪ್ರಕಟವಾದೀತೋ ಇಲ್ಲವೋ ನಾನರಿಯೆ. ಭಾರತವೀಗ ವಿಚಿತ್ರ ದೇಶವಾಗಿದೆ. ಮುಂದೇನಾದೀತೋ ಹೇಳುವುದು ಕಷ್ಟ. ಅವಕಾಶವಿರುವಾಗಲೇ ಈ ನಾಲ್ಕು ವಾಕ್ಯ ಬರೆಯುತ್ತಿದ್ದೇನೆ. ಇಲ್ಲದಿದ್ದರೆ ಕಾಲ ತನ್ನ ಕೈಚಳಕ ತೋರಿಸೀತು’ ಎನ್ನುತ್ತಾರೆ ನೆಹರು ಈ ಪುಸ್ತಕದ ಪೀಠಿಕೆಯಲ್ಲಿ. `ಮೈಗೆ ಏನೂ ಕೆಲಸವಿಲ್ಲದಿದ್ದರೆ ಮನಸ್ಸು ವಿಧವಿಧದ ಕಲ್ಪನಾ ವಿಲಾಸದಲ್ಲಿ ಮುಳುಗುತ್ತದೆ. ಅಂತರ್ಮಥನ ಪ್ರಾರಂಭವಾಗುತ್ತದೆ. ಅಂಥ ಬೇರೆ ಬೇರೆ ಮನಃಸ್ಥಿತಿಗಳ ಚಿತ್ರ ಈ ಪತ್ರಗಳಲ್ಲಿ ಒಡೆದು ಕಾಣುತ್ತದೆಯೋ ಏನೋ! ಇವುಗಳ ರೀತಿಯೂ ಇತಿಹಾಸಕಾರನ ವಸ್ತುಪ್ರಧಾನ ರೀತಿಯಲ್ಲ. ನಾನು ಇತಿಹಾಸಜ್ಞನೆಂದು ಹೇಳಿಕೊಳ್ಳುವುದಿಲ್ಲ. ಎಳೆಯ ಮಕ್ಕಳಿಗೆ ಹೇಳಬೇಕಾದ ವಿಷಯ, ರೀತಿ, ದೊಡ್ಡವರಿಗೆ ತಿಳಿಸಬೇಕಾದ ವಿಚಾರ, ಚರ್ಚೆ ಎರಡೂ ಇದರಲ್ಲಿ ಸೇರಿದೆ. ಪುನರುಕ್ತಿ ಬೇಕಾದಷ್ಟಿದೆ. ಹಾಗೆ ನೋಡಿದರೆ, ಈ ಪತ್ರಮಾಲೆಯಲ್ಲಿರುವ ದೋಷಗಳಿಗೆ ಕೊನೆಯೆ ಇಲ್ಲ. ಎಲ್ಲವೂ ಸಾಮಾನ್ಯ ಚಿತ್ರ, ತೇಲಿಸಿ ಬರೆದ ಬರವಣಿಗೆ. ಈ ಮಾಲೆ ಪೋಣಿಸಿರುವ ದಾರವೂ ಗಟ್ಟಿದಾರವಲ್ಲ. ಯಾವ ಯಾವುದೋ ಪುಸ್ತಕಗಳಿಂದ ವಿಷಯ ಸಂಗ್ರಹ ಮಾಡಿದ್ದೇನೆ. ಅದರಲ್ಲಿ ಎಷ್ಟೋ ತಪ್ಪು ಆಗಿರಬಹುದು. ಸಮರ್ಥರಾದ ಇತಿಹಾಸಜ್ಞರ ಕೈಗೆ ಕೊಟ್ಟು ಈ ಪತ್ರ ಮಾಲೆಯನ್ನು ತಿದ್ದಿಸುವ ಯೋಚನೆ ಮಾಡಿದೆ. ಆದರೆ ಬಿಡುವಾಗಿ ಸೆರೆಯಿಂದ ಹೊರಗೆ ನಾನಿದ್ದುದು ಅತ್ಯಲ್ಪಕಾಲ. ಅಷ್ಟರಲ್ಲಿ ಆ ಏರ್ಪಾಡು ಮಾಡಲಾಗಲಿಲ್ಲ. ಈ ಪತ್ರಗುಚ್ಛದಲ್ಲಿ ನನ್ನ ಅಭಿಪ್ರಾಯವನ್ನು ಹೇಳುವಾಗ ಕೊಂಚ ಬಿರುಸಾಗಿಯೆ ಹೇಳಿದ್ದೇನೆ. ಈಗಲೂ ನನಗೆ ಅಭಿಪ್ರಾಯಗಳಿವೆ. ಆದರೆ ಈ ಪತ್ರಗಳನ್ನು ಬರೆಯುತ್ತಿರುವಾಗಲೇ, ಬರೆಯುತ್ತಲೇ ಇತಿಹಾಸದ ಬಗ್ಗೆ ನನ್ನ ದೃಷ್ಟಿ ಕ್ರಮವಾಗಿ ಬದಲಾಯಿತು. ಈ ಇವನ್ನೆಲ್ಲ ಮತ್ತೆ ಬರೆಯುವುದಾದರೆ ಬೇರೆ ರೀತಿಯಲ್ಲಿ ಬರೆದೇನು, ಬೇರೆ ದೃಷ್ಟಿ ಅದರಲ್ಲಿ ಕಂಡೀತು. ಆದರೆ ಒಮ್ಮೆ ಬರೆದುದನ್ನೆಲ್ಲ ಭಸ್ಮ ಮಾಡಿ ಮತ್ತೊಮ್ಮೆ ಹೊಸದಾಗಿ ಬರೆಯಲಾರೆ ಎಂದು ನೆಹರೂರವರೇ ಈ ಪುಸ್ತಕವನ್ನು ವಿಮರ್ಶೆ ಮಾಡಿದ್ದಾರೆ.
©2024 Book Brahma Private Limited.