’ಪರಿಶಿಷ್ಟ ಜಾತಿಗಳ ಸಮಸ್ಯೆ ಈಗಾಗಲೇ ತುಂಬ ಉಲ್ಬಣಗೊಂಡು ಭಯಂಕರ ಸ್ವರೂಪ ತಾಳಿದೆ. ಅವರಲ್ಲುಂಟಾಗಿರುವ ಚೂರುಪಾರು ಪ್ರಜ್ಞೆಯ ಪರಿಣಾಮವಾಗಿ ಅವರು ತುಂಬ ದುರ್ಬಲ ರೀತಿಯಲ್ಲಾದರೂ ತಮ್ಮ ಮೇಲಾಗುತ್ತಿರುವ ಅನ್ಯಾಯ, ಅತ್ಯಾಚಾರಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಅತ್ಯಂತ ಲಜ್ಞಾಹೀನ ರೀತಿಯಲ್ಲಿ ನಡೆಸಲಾಗುತ್ತಿರುವ ದಬ್ಬಾಳಿಕೆಗಳ ವಿರುದ್ಧ ಕಾಣಿಸಿಕೊಳ್ಳುತ್ತಿರುವ ದಲಿತರ ಪ್ರತಿಭಟನೆ ತನ್ನದೇ ಆದ ರೀತಿಯಲ್ಲಿ ಗಮನಾರ್ಹವಾಗಿದೆ. ಈ ದಬ್ಬಾಳಿಕೆಗಳು, ಈ ಅತ್ಯಾಚಾರಗಳು ನಾಗರಿಕ ಸಮಾಜ ಕನಸಿನಲ್ಲಿಯೂ ಕಾಣಲಾಗದ ಅಮಾನವೀಯ ಸ್ವರೂಪದ್ದಾಗಿದೆ. ಅವುಗಳ ಸಂಖ್ಯೆ ದಿನದಿಂದ ದಿನಕ್ಕೆ ವರ್ಧಿಸುತ್ತಿದೆ; ಅವುಗಳ ತೀವ್ರತೆ ಕ್ರಮೇಣ ಹೆಚ್ಚಾಗುತ್ತಿದೆ. ಭಾರತೀಯ ಸಮಾಜ ಇದನ್ನೆಲ್ಲಾ ಮೌನದಿಂದ ಸಹಿಸುತ್ತಿರುವುದು ತುಂಬಾ ವಿಚಿತ್ರವಾದದ್ದು. ಕೆಲವು ಅರ್ಥದಲ್ಲಿ ಭಾರತೀಯ ಸಮಾಜವೇ ಈ ದಬ್ಬಾಳಿಕೆಗಳ ಸಂಚು ನಡೆಸುತ್ತಿದೆ ಎಂಬ ಆಪಾದನೆಗೆ ಅರ್ಹವಾಗಿದೆ. ಅಪರಾಧ ನಡೆದ ತಕ್ಷಣವೇ ಅಪರಾಧಿಗಳನ್ನು ಬಂಧಿಸುವುದು ತೀರಾ ವಿರಳ. ಇನ್ನು ಅವರಿಗೆ ಶಿಕ್ಷೆಯಾಗುವ ಹೊತ್ತಿಗೆ ಜನರು ಸಾಮಾನ್ಯವಾಗಿ ಆ ಅಪರಾಧದ ಘಟನೆಯನ್ನೇ ಮರೆತಿರುತ್ತಾರೆ. ಇದಕ್ಕೆ ಕಾರಣ ನಮ್ಮ ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ನುಸುಳಿಕೊಂಡಿರುವ ನಿಧಾನ ನೀತಿ ಮೇಲಾಗಿ ಕಾನೂನಿನ ಪ್ರಕ್ರಿಯೆ ತುಂಬ ಖರ್ಚಿನ ಬಾಬತ್ತಾಗಿದೆ’ ಎನ್ನುತ್ತಾರೆ ಬಾಬು ಜಗಜೀವನರಾಂ.
ಅಸ್ಪೃಶ್ಯತೆ ವಿರುದ್ಧ ಟೊಂಕಕಟ್ಟಿ ನಿಂತವರು ’ಬಾಬೂಜಿ’. ಅವರೊಬ್ಬ ಸಮಾಜ ಸುಧಾರಕ ಮತ್ತು ವಿಶಿಷ್ಟ ನೆಲೆಯ ರಾಜಕಾರಣಿ. ಹಸಿರು ಕ್ರಾಂತಿಯ ಹರಿಕಾರ ಎಂದೂ ಜನಪ್ರಿಯ. ಜಾತಿ ವ್ಯವಸ್ಥೆಯ ಬಗ್ಗೆ ಅವರು ಬರೆದಷ್ಟು ನಿಖರವಾಗಿ ಇನ್ನಾರೂ ಬರೆಯಲು ಸಾಧ್ಯವಿಲ್ಲ. ಜಾತಿಯ ಸಕಲ ಅವತಾರಗಳನ್ನೂ ಕಣ್ಣಾರೆ ಕಂಡವರು ಅವರು. ಹಾಗೆ ಕಂಡದ್ದು, ಕೇಳಿದ್ದು ಅನುಭವಿಸಿದ ಸಂಗತಿಗಳ ಜೊತೆಗೆ ಜಾತಿ ವಿನಾಶ ಮಾಡುವುದು ಹೇಗೆ ಎನ್ನುವುದನ್ನು ಕೃತಿ ಧ್ಯಾನಿಸುತ್ತದೆ. ಆರ್.ಕೆ. ಹುಡಗಿ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ.
©2024 Book Brahma Private Limited.