ಪ್ರೊ. ಕಂಚ ಐಲಯ್ಯ ಶೆಫರ್ಡ್ ಅವರ ತೆಲುಗು ಕೃತಿಯನ್ನು ಬಿ. ಸುಜ್ಞಾನಮೂರ್ತಿ ಅವರು ಕನ್ನಡೀಕರಿಸಿದ್ದಾರೆ. ಗೂಂಡಾಗಿರಿ, ಗೂಂಡಾಗಳು ಇತ್ಯಾದಿ ಪದಗಳು ದೈನಂದಿನ ಬಳಕೆಯಲ್ಲಿ ಇಂದು ಸಾಮಾನ್ಯವಾಗಿವೆ. ದೇಹಬಲವನ್ನು ದರೋಡೆಗೆ, ಹೊಡೆದಾಟ-ಬಡಿದಾಟಗಳಿಗೆ ಬಳಸುವುದನ್ನು ಹಾಗೂ ಬಳಸುವಂತೆ ಮಾಡುವುದನ್ನು ಗೂಂಡಾಗಿರಿ ಎನ್ನುತ್ತಾರೆ. ಇದು ಕಣ್ಣಿಗೆ ಕಾಣುತ್ತದೆ. ಇದು ಮೂರ್ತವಾದುದು. ಗೂಂಡಾಗಿರಿಯ ಮುಖ್ಯ ಲಕ್ಷಣ ಎಂದರೆ, ಬಲಹೀನರನ್ನು ಬೆದಕಿ, ತದಕಿ ಮೆತ್ತಗೆ ಮಾಡುವುದು. ಈ ಮೂಲಕ ತನ್ನ ಹಿತಾಸಕ್ತಿಯನ್ನು ಸಾಧಿಸಿಕೊಳ್ಳುವುದು. ಹಾಗಾಗಿ ಸಮಾಜದಲ್ಲಿ ಗೂಂಡಾಗಿರಿಯು ತಪ್ಪು ಎಂಬುದು ಎಲ್ಲರಿಗೂ ಗೊತ್ತು. ಹಾಗಿದ್ದರೂ ದೇಹಪ್ರಧಾನ ಗೂಂಡಾಗಿರಿಗೆ ಎಲ್ಲರೂ ಹೆದರುತ್ತಾರೆ ಅಥವಾ ಹೆದರುವಂತೆ ಮಾಡಲಾಗಿದೆ ಎಂಬುದನ್ನು ಇಲ್ಲಿ ಚರ್ಚೆಗೆ ಒಳಪಡಿಸಲಾಗಿದೆ.
ಸುಜ್ಞಾನ ಮೂರ್ತಿ ಕೃತಿಗಳ ಪುಸ್ತಕ ವಿಮರ್ಶೆ- ಹೊಸ ಮನುಷ್ಯ
ತನ್ನ ಪ್ರಖರ ವೈಚಾರಿಕ ಚಿಂತನೆ ಮತ್ತು ಸ್ಪಷ್ಟ ನಿಲುವು ಹಾಗೂ ಅದರ ಸರಳ -ನೇರ ನಿರಪಣೆ ಗೆ ಹೆಸರಾದವರು ಚಿಂತಕ ಪ್ರೊ. ಕಂಚ ಐಲಯ್ಯ ಶೆಫರ್ಡ್ ಅವರು. 'ನಾನೇಕೆ ಹಿಂದೂ ಅಲ್ಲ' ಕೃತಿಯ ಮೂಲಕ ಗಮನ ಸೆಳೆದ ಕಂಚ ಐಲಯ್ಯ ಅವರು ತೆಲುಗಿನಲ್ಲಿ ರಚಿಸಿದ ಐದು ವೈಚಾರಿಕ ಕಿರು ಪುಸ್ತಿಕೆಗಳನ್ನು ಬಿ. ಸುಜ್ಞಾನಮೂರ್ತಿ ಅವರು ಕನ್ನಡೀಕರಿಸಿದ್ದಾರೆ. ತಮ್ಮ ಟೈಟಲ್‌ಗಳ ಮೂಲಕವೇ ಗಮನ ಸೆಳೆಯುತ ಈ ಐದು ಕೃತಿಗಳು ಒಂದು ಮತ್ತೊಂದಕ್ಕೆ ಪೂರಕವಾಗಿರುವ ಹಾಗೆಯೇ ಸ್ವತಂತ್ರವಾಗಿಯೂ ತನ್ನ ಅಸ್ತಿತ್ವ ಸಾಬೀತು ಪಡಿಸುತ್ತವೆ.
ಹಿಂದೂ ಧರ್ಮದಲ್ಲಿ ಬೌದ್ಧಿಕ ಗುತ್ತಿಗೆ ಪಡೆದಿರುವವರನ್ನು 'ಬ್ರಾಹ್ಮಣಿಜಂ' ಎಂಬ ಪದದ ಮೂಲಕ ಕಂಚ ಐಲಯ್ಯ ಅವರು ಗುರುತಿಸುತ್ತಾರೆ. ಕಂಚ ಐಲಯ್ಯ ಅವರಿಗೆ ಬ್ರಾಹ್ಮಣ್ಯ ಅನ್ನುವುದು ಕೇವಲ ಟೀಕಿಸುವುದಕ್ಕೆ -ತರಾಟೆಗೆ ತೆಗೆದುಕೊಳ್ಳುವುದಕ್ಕಾಗಿ ಮಾತ್ರ ಇರುವ ಸಂಗತಿಯಲ್ಲ. ಅದಕ್ಕೊಂದು ತಾತ್ವಿಕತೆಯಿದೆ. ಆ ತಾತ್ವಿಕತೆಯು ಮೆದುಳಿನಂತೆ ನಿರ್ದೇಶನ ಮಾಡುತ್ತ ಎಲ್ಲವನ್ನೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಯಸುವುದರ ಜೊತೆಗೆ ಶೋಷಕ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಎಂಬ ನಿಲುವು ಈ ಪುಸ್ತಕಗಳಲ್ಲಿದೆ. ಹೀಗಾಗಿ ಮೇಲ್ನೋಟಕ್ಕೆ ಬ್ರಾಹ್ಮಣ ವಿರೋಧಿ ಎಂಬಂತೆ ಭಾಸವಾಗುವ ಈ ಕೃತಿಗಳ ವಿಚಾರಗಳು ಆಳದಲ್ಲಿ ಅಷ್ಟಕ್ಕೇ ಸೀಮಿತವಾಗುವುದಿಲ್ಲ. ಅಥವಾ ಟೀಕೆಗಾಗಿ ಟಿಪ್ಪಣಿ ಮಾಡುವ ಜಾಯಮಾನದ ಬರಹಗಳಲ್ಲ. ಐತಿಹಾಸಿಕ ವಿವರಗಳನ್ನು ವಿಶ್ಲೇಷಣೆಗೆ ಒಳಪಡಿಸುವ ಆಳವಾದ ಚಿಂತನೆಯ ಜೊತೆಗೆ ವಿಶಿಷ್ಟ ತಾತ್ವಿಕತೆ ಕಟ್ಟಿಕೊಡುತ್ತವೆ. ಹಾಗೆಯೇ ತರ್ಕಬದ್ದ ಹಾಗೂ ವೈಜ್ಞಾನಿಕ ನೋಟಕ್ರಮ ಈ ಪುಸ್ತಕಗಳ ಒಂದು ವಿಶೇಷ ಅಂಶ. ಈ ಪುಸ್ತಕಗಳ ಬರಹಗಳು ಭಾವನಾತ್ಮಕ ಪ್ರತಿಕ್ರಿಯೆಗಳಲ್ಲ. ಹಾಗಾಗದಂತೆ ಲೇಖಕರು ವಹಿಸಿರುವ ಶ್ರಮ-ಪರಿಶ್ರಮ ಸಷ್ಟವಾಗಿ ಎದ್ದು ಕಾಣಿಸುತ್ತದೆ.
ಈ ಪುಸ್ತಕದಲ್ಲಿ ಚರ್ಚಿತವಾದ ವಿಷಯ-ವಿಚಾರಗಳು ಶುಷ್ಕ ಅಕಾಡೆಮಿಕ್ ಜ್ಞಾನದ ಬೌದ್ಧಿಕ ಕಸರತ್ತುಗಳಾಗದಂತೆಯೂ ಲೇಖಕರು ಎಚ್ಚರ ವಹಿಸಿದ್ದಾರೆ. ಬ್ರಾಹ್ಮಣ ಕ್ಷತ್ರಿಯ ವೈಶ್ಯ 'ದ್ವಿಜರು ಹಿಂದೂ ಧರ್ಮದ ಆಧ್ಯಾತ್ಮಿಕ ಸಮಾನತೆಯನ್ನು ಶೂದ್ರರಿಗೆ ನಿರಾಕರಿಸುವ ಮೂಲಕ ನಿಮಿತ್ತ ಮಾತ್ರ ಹಾಜರಿಯನ್ನು ದಾಖಲಿಸಲಾಯಿತು. ಅದರಿಂದ ಆತ್ಮಾಶ್ರಯ ವ್ಯಕ್ತಿತ್ವ ಇಲ್ಲದಂತಾದ ಶೂದ್ರ ಸಮುದಾಯವು ತಾತ್ವಿಕ ವ್ಯಕ್ತಿತ್ವ ಬೆಳೆಸಿಕೊಳ್ಳಲಾಗದಂತೆ ನೋಡಿಕೊಳ್ಳಲಾಯಿತು. 'ದೇವಾಲಯ ಎಂಬುದು ಕೇವಲ ಪ್ರಾರ್ಥನಾ ಸ್ಥಳ ಮಾತ್ರವೇ ಅಲ್ಲ. ಅದು ತಾತ್ತಿಕ ಚರ್ಚೆಗಳಿಗೆ ಕೇಂದ್ರ ಕೂಡ. ಸಾಮಾಜಿಕ, ಆರ್ಥಿಕ, ತಾತ್ವಿಕ ಚರ್ಚೆಗಳಲ್ಲಿ ಕೆಲವು ಸಾಮಾಜಿಕ ವರ್ಗಗಳನ್ನು ಪಾಲ್ಗೊಳ್ಳಲು ಬಿಡದಿದ್ದಾಗ ಆ ಸಮಾಜಗಳು ತಾತ್ವಿಕವಾಗಿ ಏಳು ಬೀಳು ಇಲ್ಲದೆ ಹಾಗೆಯೇ ಇದ್ದು ಬಿಡುತ್ತವೆ' ಎನ್ನುವ ಲೇಖಕರು ಇದು “ಅಸಹಜವಾದ ಜಾತಿ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದಕ್ಕೆ ಅಸಮಾನತೆಯಿಂದ ಕೂಡಿದ ಪ್ರತಿಕೂಲ ತತ್ವ' ಎಂದು ವಿವರಿಸುತ್ತಾರೆ.
'ದೇಸಿ' ತಾತ್ವಿಕತೆಯನ್ನು ಕಟ್ಟಿಕೊಡುವ ದೃಷ್ಟಿಯಿಂದ ಮಹತ್ವದ್ದಾಗಿರುವ ಪುಸ್ತಕಗಳಿವು. ನೆಲಮೂಲದ ಸ್ಥಳೀಯ ಚಟುವಟಿಕೆ- ಆಚರಣೆ- ಪರಂಪರೆಗಳಿಗೆ ತಾತ್ವಿಕ ಚೌಕಟ್ಟು ಒದಗಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.
ಇಲ್ಲಿ ಬಳಕೆಯಾಗುವ ಭಾಷೆಯು ಲೇಖಕರ ಖಚಿತ ನಿಲುವಿನ ಸೂಚನೆಯಾಗಿದೆ. “ಆಧ್ಯಾತ್ಮಿಕ ಸರ್ವಾಧಿಕಾರಿಗಳು, ಸಾಮಾಜಿಕ ಸ್ಮಗ್ಲರ್‌ಗಳು, ಇಂಟಲೆಕ್ಚುವಲ್ ಗೂಂಡಾಗಳು ಮಾತ್ರ ಶೂದ್ರರ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯನ್ನು ಅನುಮತಿಸುವುದಿಲ್ಲ' ರೀತಿಯ ವಾಕ್ಯಗಳು ಸ್ಟೇಟ್‌ಮೆಂಟ್‌ಗಳ ತರಹ ಕಾಣಿಸುತ್ತವೆ ಕೇಳಿಸುತ್ತವೆ. ಹಾಗೆ ಅವು ಕಾಣುವುದು ಕತ್ತರಿಸಿ ಹೊರ ತೆಗೆದಾಗ ಮಾತ್ರ, ವೈಚಾರಿಕ ಸ್ಪಷ್ಟತೆಯು ಇಂತಹ ಪದಗಳನ್ನೂ ಅರಗಿಸಿಕೊಳ್ಳುತ್ತದೆ.
ಕಂಚ ಐಲಯ್ಯ ಅವರ ಈ ಪುಸ್ತಕಗಳು ಸಿದ್ಧಮಾದರಿಯ ಪಾಶ್ಚಾತ್ಯ-ಬ್ರಾಹ್ಮಣ ಚರಿತ್ರೆಯ ಮಾದರಿಯಿಂದ ಬಿಡಿಸಿಕೊಂಡು ಕಟ್ಟಿದ ಜಾತಿಕಥನಗಳು. ಕಂಚ ಐಲಯ್ಯ ಅವರ ಒಳನೋಟಗಳು ಗಮನ ಸೆಳೆಯದೇ ಇರಲಾರವು. 'ಶೂದ್ರರ ತಾತ್ವಿಕತೆ ಕೇವಲ ಸೃಜನಾತ್ಮಕವಾದುದೇ ಅಲ್ಲ; ಮಾನವೀಯವಾದದ್ದು, ಸಮಗ್ರವಾದದ್ದು ಕೂಡ', 'ಆಧ್ಯಾತ್ಮಿಕ ವ್ಯಕ್ತಿತ್ವವನ್ನು ಗಳಿಸಿಕೊಳ್ಳದೇ ಹೋದದ್ದರಿಂದ ಶೂದ್ರರು ತಾತ್ವಿಕ ವ್ಯಕ್ತಿತ್ವವನ್ನು ಕೂಡ ನಿರ್ಮಿಸಿಕೊಳ್ಳದೇ ಹೋದರು' ಎಂಬ ಖಚಿತತೆ ಕಾಣಬಹುದು. ಈ ಬಗೆಯ ನಿಲುವು ತಳೆಯುವುದಕ್ಕೆ ಲೇಖಕರು ಒಳಗೊಳ್ಳುವ ಚಿಂತನ ಕ್ರಮ ರೂಢಿಸಿಕೊಂಡಿರುವುದು ಕಾರಣ. ಚರಿತ್ರೆ, ಧರ್ಮ, ಆಧ್ಯಾತ್ಮ, ತಾತ್ವಿಕತೆ, ಸಾಮಾಜಿಕ ಸಂಗತಿಗಳನ್ನು ತಮ್ಮ ವಿಚಾರ ಮಂಡಿಸುವುದಕ್ಕೆ ಬಳಸಿಕೊಳ್ಳುವ ಲೇಖಕರ ಕಾಳಜಿ ಸಮ ಸಮಾಜದ ನಿರ್ಮಾಣ ಹಾಗೂ ಶೋಷಕ ವ್ಯವಸ್ಥೆ ನಿರ್ಮೂಲನೆ.
ಹೊಲೆಯ ತತ್ವ ಮತ್ತು ಮಾದಿಗತತ್ವ ಎಂಬ ಎರಡು ಪುಸ್ತಕಗಳು ಸಾಮಾಜಿಕ, ಆರ್ಥಿಕ ವಿಶ್ಲೇಷಣೆಗಳಾಗಿವೆ. ಈ ಎರಡೂ ತತ್ವಗಳಲ್ಲಿದ್ದ ವೈಜ್ಞಾನಿಕ ಜ್ಞಾನದ ಹುಡುಕಾಟ ಮತ್ತು ಅದನ್ನು ಕಟ್ಟಿಕೊಡುವ ವಿಧಾನ ವಿಶಿಷ್ಟವೆನ್ನಿಸುತ್ತದೆ. ಹೊಲೆಯರ ಸಾಗುವಳಿ ನೀರಿನ ಜ್ಞಾನ, ಗೊಬ್ಬರ ತಯಾರಿ ಜ್ಞಾನ ಹಾಗೂ ಚರ್ಮ ಕೈಗಾರಿಕೆ ಕೃಷಿ ಕ್ರಾಂತಿ, ನೀರಾವರಿ- ಚರ್ಮ ಕೈಗಾರಿಕೆ ಹೀಗೆ ಶ್ರಮ ಸಂಸ್ಕೃತಿಗೆ ತಾತ್ವಿಕತೆಯ ಚೌಕಟ್ಟು ಒದಗಿಸುವ ಲೇಖಕರು ಅವನ್ನು 'ಜ್ಞಾನ' ಎಂದು ಗುರುತಿಸುವುದು ವಿಶೇಷ. ಒಂದೇ ಸಿಟ್ಟಿಂಗ್‌ನಲ್ಲಿ ಓದಿ ಮುಗಿಸಬಹುದಾದ ಈ ಪುಸ್ತಕಗಳು ತಮ್ಮ 'ಗಾಢ' ಚಿಂತನೆಯ ಕಾರಣದಿಂದ ಮರುಓದುಗಳನ್ನು ನಿರೀಕ್ಷಿಸುತ್ತವೆ. ಬಿ. ಸುಜ್ಞಾನಮೂರ್ತಿ ಅವರ ಅನುವಾದವು ಸೊಗಸಾಗಿದೆ. ಓದುತ್ತಿರುವುದು ಕನ್ನಡೇತರ ಕೃತಿಯ ಅನುವಾದ ಎನ್ನಿಸದೇ ಇರುವಷ್ಟು ಸಹಜವಾಗಿದೆ. ಇಂತಹ ಅಪರೂಪದ-ಮಹತ್ವದ ವೈಚಾರಿಕ ಕೃತಿಗಳನ್ನು ಕನ್ನಡದಲ್ಲಿಯೇ ಓದುವುದಕ್ಕೆ ಅನುವು ಮಾಡಿಕೊಟ್ಟ ಸುಜ್ಞಾನಮೂರ್ತಿ ಅಭಿನಂದನಾರ್ಹರು.
( ಕೃಪೆ: ಪುಸ್ತಕಾವಲೋಕನ, ಬರಹ: ದೇವು ಪತ್ತಾರ)
©2024 Book Brahma Private Limited.