ಉತ್ತಮ ಕಾಂಬಳೆ ಮರಾಠಿಯಲ್ಲಿ ಬರೆದ ’ದೇವದಾಸಿ ಮತ್ತು ಬೆತ್ತಲೆ ಸೇವೆ’ ಎಲ್ಲರೂ ಓದಬೇಕಾದ ಕೃತಿ. ದೇವದಾಸಿ ಪದ್ದತಿ ಅಥವಾ ಬೆತ್ತಲೆ ಸೇವೆಯಂತಹ ಅನಿಷ್ಟ ಆಚರಣೆಗಳು ಕೇವಲ ಮಹಾರಾಷ್ಟ್ರಕ್ಕೆ ಸೀಮಿತವಾಗಿಲ್ಲ. ದೇಶದ ಉದ್ದಗಲಕ್ಕೂ ಹರಡಿಕೊಂಡಿವೆ. ಹೆಸರು ಅಥವಾ ಸ್ವರೂಪ ಬೇರೆಯದಾದರೂ ಅಮಾನೀಯ ಆಚರಣೆಗಳು ಅವು.
2013 ಫೆಬ್ರುವರಿ 26ರಂದು ಪ್ರಜಾವಾಣಿಯಲ್ಲಿ ಬಂದ ವರದಿಯೊಂದನ್ನು ಗಮನಿಸಿ: “ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ “ಭರತ ಹುಣ್ಣಿಮೆ' (ಮುತ್ತೈದೆ ಹುಣ್ಣಿಮೆ)ಯಂದು ಮಾಜಿ ದೇವದಾಸಿಯರು ತಮ್ಮ ಅನಿಷ್ಟ ಪದ್ಧತಿ ನವೀಕರಣಗೊಳಿಸಿಕೊಂಡರು. 'ಮುತ್ತೈದೆ ಹುಣ್ಣಿಮೆ ಎಂದೇ ಕರೆಯಲಾಗುವ ಈ ದಿನ ಉಚ್ಚಂಗಿದುರ್ಗಕ್ಕೆ ರಾಜ್ಯದ ವಿವಿಧೆಡೆಯ ಸಾವಿರಾರು ಮಾಜಿ ದೇವದಾಸಿಯರು ಆಗಮಿಸಿದ್ದರು. ಕೈಯಲ್ಲಿನ ಹಸಿರು ಬಳೆ, ಕೊರಳಲ್ಲಿನ ಬಿಳಿ ಮತ್ತು ಕೆಂಪು ಮುತ್ತಿನ ಸರ, ಪಡ್ಡಗೆ (ದೇವರ ಸಾಮಾನುಳ್ಳ ಸಣ್ಣ ಪುಟ್ಟಿ)ಯನ್ನು ಮತ್ತೆ ಹೊಸದಾಗಿ ಧರಿಸುವ ಮೂಲಕ ದೇವದಾಸಿ ಪದ್ಧತಿ ನವೀಕರಣಗೊಳಿಸಿಕೊಳ್ಳುವ ಧಾರ್ಮಿಕ ಆಚರಣೆ ಕೈಗೊಂಡರು. “ಮನೆಯಲ್ಲಿ ಬಡತನ, ಹೇಗೋ 7, 8ನೇ ತರಗತಿ ತನಕ ಓದಿದೆವು. ಅಷ್ಠಾರಲ್ಲಾಗಲೇ ತಲೆಯಲ್ಲಿ 'ಜಡೆ' ಕಾಣಿಸಿಕೊಂಡಿತು. ಹಾಗಾಗಿ, ಗ್ರಾಮದ ಮುಖಂಡರು, ಮನೆಯ ಹಿರಿಯರು ಇದು ದೇವಿಯ ಪ್ರತೀಕ ಎಂದು ನಂಬಿ, ನಮಗೆ 'ಮುತ್ತು' ಕಟ್ಟಿಸಿದರು. ಈಗ ಈ ಪದ್ದತಿಯಿಂದ ಹೊರಬರಲಾರದಷ್ಟು ಅದರಲ್ಲಿ ಬೆರೆತಿದ್ದೇವೆ. ನಮಗೆ ಯಾರೂ ಕೂಲಿ ಕೊಡೋದಿಲ್ಲ. ಯುವಕರಿಂದ ಹಿಡಿದು ಮುದುಕರ ತನಕ ಎಲ್ಲರೂ ಆಸೆಯಿಂದಲೇ ನಮ್ಮತ್ತ ಕಣ್ಣು ಹಾಯಿಸುತ್ತಾರೆ. ನಾವು ಕೆಳ ಜಾತಿಯವರು. ಮೇಲ್ವರ್ಗದ ಮಹಿಳೆಯರಿಗೆ ಇಲ್ಲದ ಈ ಪದ್ದತಿಗೆ ನಮಗೇಕೆ ಎಂದು ಎಷ್ಟೋ ಸಲ ಅನಿಸಿದೆ. ನಮಗೂ ಅವರಂತೆ ಮದುವೆಯಾಗಿ ಗಂಡ-ಮಕ್ಕಳ ಜತೆ ಇದ್ದು ಸಂಸಾರ ಮಾಡಬೇಕು ಎಂಬ ಆಸೆಯಾಗುತ್ತೆ. ಆದರೆ, ಸಮಾಜ ನಮ್ಮನ್ನು ವೇಶೈಯಯರಂತೆ ಕಾಣುತ್ತದೆ. ಮರ್ಯಾದೆಯಿಂದ ಬದುಕಲೂ ಆಗದೇ, ಕೂಲಿ ಮಾಡಲೂ ಆಗದೇ, ತುತ್ತು ಅನ್ನಕ್ಕಾಗಿ ಈ ನೋವು ಅನುಭವಿಸುತ್ತಿದ್ದೇವೆ' ಎಂದು ನೊಂದು ನುಡಿದರು.”
ಈ ಘಟನೆಯೇ ಪುಸ್ತಕದ ಮಹತ್ವವನ್ನು ಹೇಳುತ್ತದೆ. ಸಮಾಜ ಸುಧಾರಣೆಯಾದರೂ, ಆಧುನಿಕಗೊಂಡರೂ, ಹೊಸ ಹೊಸ ಆವಿಷ್ಕಾರಗಳು ನಡೆದರೂ ಇಂತಹ ಕೆಟ್ಟ ಆಚರಣೆಗಳು ಸಮಾಜವನ್ನು ಕಾಡುವುದೇಕೆ ಎಂದು ಕೃತಿ ಪ್ರಶ್ನಿಸುತ್ತದೆ. ಸಮಸ್ಯೆಗೆ ಪರಿಹಾರವನ್ನೂ ಸೂಚಿಸಲು ಯತ್ನಿಸುತ್ತದೆ.
©2024 Book Brahma Private Limited.