ಭೀಮಾಯಣ -ಅಸ್ಪೃಶ್ಯತೆಯ ಅನುಭವಗಳು- ಈ ಕೃತಿಯನ್ನು ದುರ್ಗಾಬಾಯಿ ವ್ಯಾಮ್ ಹಾಗೂ ಸುಭಾಷ್ ವ್ಯಾಮ್ ಅವರು ಜಂಟಿಯಾಗಿ ಮರಾಠಿಯಲ್ಲಿ ಬರೆದಿದ್ದು, ಅದನ್ನು ಲೇಖಕ ವಿ.ಎಸ್.ಎಸ್. ಶಾಸ್ತ್ರಿ ಅವರು ಕನ್ನಡೀಕರಿಸಿದ್ದಾರೆ. ಭಾರತದಲ್ಲಿ ಅಸ್ಪೃಶ್ಯ ಇದೆ. ಇದು ಅಮಾನವೀಯ ಪದ್ಧತಿ. ಕೆಲವು ಭಾರತೀಯರೇಕೆ ಇತರರನ್ನು ಸ್ಪರ್ಶಿಸಲು ಹೇಸುತ್ತಾರೆ? ಭೀಮರಾವ್ ರಾಮ್‌ಜೀ ಅಂಬೇಡ್ಕರರು ಈ ಅಂಶವನ್ನು ಎತ್ತಿಕೊಂಡು ಪ್ರಖರವಾದ ಪ್ರಶ್ನೆಗಳ ಮೂಲಕ ಇಡೀ ಭಾರತೀಯ ಸಾಮಾಜಿಕ ಪದ್ಧತಿಯನ್ನೇ ಪ್ರಶ್ನಿಸುತ್ತಾರೆ. ತಮ್ಮ ಬಾಲ್ಯದ ಅನುಭವಗಳು, ಶಾಲೆಯಲ್ಲಿ ಓದುತ್ತಿದ್ದಾಗ, ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಬಂದ ಬಳಿಕ ಬರೋಡದಲ್ಲಿ: ತಾವು ಪ್ರಯಾಣಿಸುತ್ತಿದ್ದಾಗ ಹೀಗೆ ವಿವಿಧ ಸಂದರ್ಭಗಳಲ್ಲಿ ಅವರು ಅನುಭವಿಸಿದ ಎಲ್ಲ ಅಮಾನವೀಯ ಘಟನೆಗಳನ್ನು ಇಲ್ಲಿ ದಾಖಲಿಸಿದ್ದಾರೆ. ಹಿಂದೂ ಧರ್ಮದ ಅತಿ ಕೆಟ್ಟ ಪದ್ಧತಿಗಳನ್ನು ವಿರೋಧಿಸಿ ಅವರು ಬೌದ್ಧ ಧರ್ಮ ಸ್ವೀಕರಿಸಿದರು. ಇಂದಿಗೂ ಅಸ್ಪೃಶ್ಯರು ಇಂತಹ ಅಮಾನವೀಯ ಘಟನೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ, ಈ ಕೃತಿಯು ಸಾರ್ವಕಾಲಿಕ ಮೌಲ್ಯ ಪಡೆದಿದೆ. ಈ ಕೃತಿಗೆ ಭಾರತೀಯ ಪ್ರಕಾಶಕರ ಒಕ್ಕೂಟದ ‘ಅತ್ಯುತ್ತಮ ಮುದ್ರಣ ವಿನ್ಯಾಸ ಪ್ರಶಸ್ತಿ’ 2012 ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು ಮಕ್ಕಳ ಸಾಹಿತ್ಯ ಪ್ರಶಸ್ತಿ’ 2012 ಪಡೆದಿದೆ.
(ಹೊಸತು, ಡಿಸೆಂಬರ್ 2012, ಪುಸ್ತಕದ ಪರಿಚಯ)
ಸಾಹಿತ್ಯ ಮತ್ತು ಚಿತ್ರಕಲೆಗಳ ಸಂಗಮದಿಂದ ಹುಟ್ಟಿರುವ ವಿಶಿಷ್ಟ ಕೃತಿಯಿದು. ಈ ಕೃತಿಯೊಳಗಿನ ಭಾಷೆ, ಲಿಪಿಗಳು, ಚಿತ್ರಗಳಷ್ಟೇ ಕಲಾತ್ಮಕತೆಯಿಂದ ಕೂಡಿವೆ. ಹೇಳಬೇಕಾದ ಸತ್ಯಗಳನ್ನು ಕಲಾತ್ಮಕವಾಗಿ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಭಾವನೆಗಳಿಗೆ ಎಟುಕುವ ರೀತಿಯಲ್ಲಿ ಓದುಗರಿಗೆ ತಲುಪಿಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಮೊದಲು ಇಂಗ್ಲಿಷಿನಲ್ಲಿ ರಚನೆಯಾಗಿ ಆನಂತರದಲ್ಲಿ ಕೊರಿಯನ್, ಫ್ರೆಂಚ್ ಭಾಷೆಗಳೂ ಸೇರಿದಂತೆ, ಭಾರತದ ಕೆಲವು ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿರುವ ಈ 'ಭೀಮಾಯಣ' ವೆಂಬ ಕೃತಿ ಕನ್ನಡಕ್ಕೆ ಬಂದಿರುವುದು ಸ್ವಾಗತಾರ್ಹ. ಡಾ|| ಬಿ. ಆರ್. ಅಂಬೇಡ್ಕರ್ ಅವರ ಜೀವನದಲ್ಲಿ ಅವರನ್ನು ಕಾಡತೊಡಗಿದ ಅಸ್ಪೃಶ್ಯತೆಯ ಅನುಭವಗಳನ್ನು ಸಂಕ್ಷಿಪ್ತರೂಪದಲ್ಲಿದ್ದರೂ ಮನಸ್ಸಿಗೆ ತಟ್ಟುವಂತೆ ಚಿತ್ರಿಸಿರುವ ಕೃತಿಯಿದು. ಸಕೃತಿಯ ಮೊದಲ ಪುಟದಿಂದ ಹಿಡಿದು ಕೊನೆಯ ಪುಟದವರೆಗೂ ಚಿತ್ರ ನೋಡುತ್ತಿರುವಂತೆಯೂ ಕಾವ್ಯ ಓದುತ್ತಿರುವಂತೆಯೂ ಭಾಸವಾಗುತ್ತದೆ. ಈ ಕೃತಿಯ ವಿಶ್ಲೇಷಣೆಯಿರುವುದು ಕೇವಲ ಇತಿಹಾಸದ ವಿವರಗಳನ್ನಷ್ಟೇ ನೀಡದೆ ವರ್ತಮಾನದ ಸತ್ಯ ಸಂಗತಿಗಳನ್ನು ಸಹ ದಾಖಲಿಸಿರುವುದರಲ್ಲಿ ಶತಶತಮಾನಗಳಿಂದಲೂ ಆಚರಿಸಿಕೊಂಡು ಬಂದ ಅಸ್ಪೃಶ್ಯತೆ ಆ ಕಾಲಕ್ಕೆ ಮಾತ್ರವೇ ಸೀಮಿತವಾಗದೆ, ವರ್ತಮಾನದಲ್ಲಿಯೂ ಜೀವಂತವಾಗಿರುವುದನ್ನು ಈ ಕೃತಿ ದಾಖಲಿಸುತ್ತದೆ. ಕಾಲ ಬದಲಾಗಿದ್ದರೂ ಸಮಾಜವು ಇನ್ನೂ ಅಮಾನವೀಯವಾಗಿಯೇ ಉಳಿದಿರುವುದರ ಬಗೆಗೆ ವಿಷಾದ ಮತ್ತು ಸಿಟ್ಟು ಇಲ್ಲಿದೆ.
©2024 Book Brahma Private Limited.