ಲೇಖಕರಾದ ರಾಜೀವ್ ಮಲ್ಹೋತ್ರಾ ಹಾಗೂ ಅರವಿಂದನ್ ನೀಲಕಂಡನ್ ಬರೆದ ಮೂಲಕೃತಿಯನ್ನು ಲಕ್ಷ್ಮೀಕಾಂತ ಹೆಗಡೆ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ- ‘ಭಾರತ ಭಂಜನ - ದ್ರಾವಿಡ ಮತ್ತು ದಲಿತ ಬಿರುಕುಗಳಲ್ಲಿ ಪಾಶ್ಚಾತ್ಯ ಕೈವಾಡ’. ಸರ್ಕಾರದ ಯಾವುದೇ ಯೋಜನೆಗಳು ಶಬ್ದಾಡಂಬರಗಳಿಂದ ಯಶಸ್ವಿಯಾಗಲಾರವು. ಸಮಾಜದ ಕಾರ್ಯಶೀಲತೆಯನ್ನು ಹೆಚ್ಚಿಸಲಾರವು. ಯೋಜನೆಗಳ ಉದ್ದೇಶ, ಆಚರಣೆ ಮಧ್ಯೆ ಉತ್ತಮ ಸಂಬಂಧ ಇರಬೇಕು. ಆಗಲೇ ಪ್ರಗತಿ ಸಾಧ್ಯವಾಗುತ್ತದೆ. ಸ್ಪಷ್ಟ ಚಿಂತನೆ, ಅಧ್ಯಯನಪೂರ್ಣ ಪರಾಮರ್ಶನೆ, ವಸ್ತುನಿಷ್ಠ ವಿಶ್ಲೇಷಣೆ ಅಗತ್ಯ. ಐತಿಹಾಸಿಕ ಪ್ರಜ್ಞೆ ಅಗತ್ಯ. ಮುಂದಾಲೋಚನೆಯೂ ಅಗತ್ಯ. ಈ ವಿರಳ ಪ್ರಕಾರಕ್ಕೆ ಸೇರಿದ ಈಚಿನ ಒಂದು ಮಹತ್ತ್ವದ ಕೃತಿ ಇದು.
ಭಾರತ ಕುರಿತ ಸಂವಾದವೆಲ್ಲವೂ ಪಾಶ್ಚಾತ್ಯದ ಸರಕಿನಿಂದಲೇ ನಡೆಯುತ್ತಿದೆ. ಇದು ಏಕೆ? ಪಾಶ್ಚಾತ್ಯ ಸಂಸ್ಥೆಗಳಿಗೆ ಸರಿಗಟ್ಟಬಲ್ಲ ದೇಶೀಯ ಸಂಸ್ಥೆಗಳನ್ನು ರೂಪಿಸಲು ಭಾರತೀಯರು ಸಶಕ್ತರಿಲ್ಲವೆ? ಈ ದಿಕ್ಕಿನ ಚಿಂತನೆಯನ್ನು ಮುನ್ನೆಲೆಗೆ ತಂದವರು ರಾಜೀವ್ ಮಲ್ಹೋತ್ರಾ ಮತ್ತು ಅರವಿಂದನ್ ನೀಲಕಂಡನ್. ಈ ಗ್ರಂಥದಲ್ಲಿನ ಮಂಡನೆ ಆಳವಾದ ಸಂಶೋಧನೆಯ ಆಧಾರದ ಮೇಲೆ ಹೊಮ್ಮಿದೆ. ತಿಳಿವಳಿಕೆಯ ಕೊರತೆಯಿಂದಲೋ ಸ್ವಾಭಾವಿಕ ಉದಾಸೀನತೆಯಿಂದಲೋ ಇದುವರೆಗೆ ಅಲಕ್ಷ್ಯ ಮಾಡಿದ ಕಾರಣದಿಂದ ಈಗ ಸಮಸ್ಯೆಗಳು ಉಲ್ಬಣಿಸಿ ಅವನ್ನು ನಿರ್ವಹಿಸಲೇಬೇಕಾದ ಸ್ಥಿತಿಯುಂಟಾಗಿದೆ ಎಂಬ ಪಶ್ಚಾತ್ತಾಪದ ಭಾವ ಈ ಕೃತಿಯಲ್ಲಿ ಹೆಪ್ಪುಗಟ್ಟಿದೆ.
©2024 Book Brahma Private Limited.