ಆಸ್ಟ್ರಿಯ ದೇಶದ ರಾಜಧಾನಿ ವಿಯನ್ನಾ ನಗರ ಮನೋವಿಜ್ಞಾನದ ಇತಿಹಾಸದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದಿದೆ. ಆ ಪಟ್ಟಣ ಜಗತ್ಪ್ರಸಿದ್ಧರಾದ ಮೂವರು ಯೆಹೂದಿ ಮನೋವಿಜ್ಞಾನಿಗಳನ್ನು ಜಗತ್ತಿಗೆ ನೀಡಿದೆ. ಮನೋವಿಶ್ಲೇಷಣೆಯ ಜನಕ ಸಿಗ್ಮಂಡ್ ಫ್ರಾಯ್ಡ್, ವೈಯಕ್ತಿಕ ಮನೋವಿಜ್ಞಾನದ ಪ್ರತಿಪಾದಕ ಆಲ್ಫ್ರೆಡ್ ಆಡ್ಲರ್ ಮತ್ತು ಲೋಗೊಥೆರಪಿ ಎಂಬ ಮನಸ್ಚಿಕಿತ್ಸಾ ವಿಧಾನವನ್ನು ನಿರೂಪಿಸಿದ ವಿಕ್ಟರ್ ಫ್ರಾಂಕ್ಲ್ ಆ ಊರಿನವರು. ಫ್ರಾಂಕ್ಲ್ ವಿಯನ್ನಾ ನಗರದಲ್ಲಿ ಉದಯಿಸಿದ ತೃತೀಯ ಮನಸ್ಚಿಕಿತ್ಸಾ ಪಂಥದ ಅಧಿನಾಯಕ ಎನಿಸಿಕೊಂಡಿದ್ದಾನೆ. ಈ ಮೂರು ಜನರ ಕೊಡುಗೆಗಳನ್ನು ಒಳಗೊಂಡಿಲ್ಲದ ಮನೋವಿಜ್ಞಾನವನ್ನೂ ಮತ್ತು ಅದರ ಪ್ರಮುಖ ಅಂಗವಾದ ಮನಸ್ಚಿಕಿತ್ಸಾವಿಭಾಗವನ್ನು ಊಹಿಸಿಕೊಳ್ಳುವುದು ಕಷ್ಟ. ಆದರೆ ಮನೋವಿಜ್ಞಾನದ ವಿದ್ಯಾರ್ಥಿಗಳಿಗೆ ಫ್ರಾಯ್ಡ್ ಮತ್ತು ಆಡ್ಲರ್ ಬಗ್ಗೆ ತಿಳಿದಿರುವಷ್ಟು ಫ್ರಾಂಕ್ಲ್ ಬಗ್ಗೆ ತಿಳಿದಿಲ್ಲ. ಸಾಮಾನ್ಯ ಜನರಂತೂ ಅವನ ಹೆಸರನ್ನು ಕೇಳಿರುವ ಸಾಧ್ಯತೆಗಳು ಬಹಳ ಕಡಿಮೆ. ಆದ್ದರಿಂದ ಫ್ರಾಂಕ್ಲ್ ನಂತಹ ಒಬ್ಬ ಮೇರುವ್ಯಕ್ತಿಯ ಸಿದ್ಧಾಂತಗಳನ್ನು ಕನ್ನಡಿಗರಿಗೆ ಪರಿಚಯಿಸಲು, ಅವನ "ಮ್ಯಾನ್ ಸರ್ಚ್ ಫಾರ್ ಮೀನಿಂಗ್" ಎನ್ನುವ ಪುಸ್ತಕವನ್ನು "ಬದುಕಿನ ಅರ್ಥವನ್ನು ಹುಡುಕುತ್ತಾ" ಎಂಬ ಪುಸ್ತಕದ ಮೂಲಕ ಕನ್ನಡಕ್ಕೆ ಅನುವಾದಿಸಲಾಗಿದೆ.
©2024 Book Brahma Private Limited.