ಡಾ. ಓಂಪ್ರಕಾಶ್ ಪ್ರಸಾದ್ ಅವರ ಹಿಂದಿ ಭಾಷೆಯ ಕೃತಿಯನ್ನು ಲೇಖಕಿ ಡಾ. ಷಾಕಿರಾ ಖಾನಂ (ಸಾಬಿ) ಔರಂಗಜೇಬ: ಒಂದು ಹೊಸ ವಿಮರ್ಶೆ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. ಯಾವುದೇ ವಿಷಯದ ಪ್ರತಿಪಾದನೆಗೆ ಅಧ್ಯಯನ ಮತ್ತು ನಿರೂಪಣಾ ವಿಧಾನ ಎರಡೂ ಮುಖ್ಯ. ಔರಂಗಜೇಬನನ್ನು ಕುರಿತು ಕೇವಲ ಕೆಟ್ಟದ್ದನ್ನು ಕಟ್ಟಿಕೊಟ್ಟವರ ಮನೋಸೌಧವನ್ನು ಕೆಡವುತ್ತಾರೆ. ಔರಂಗಜೇಬ ಹಿಂದೂಗಳ ವಿರೋಧಿಯಲ್ಲ ಎಂದು ಸ್ಥಾಪಿಸಲು ಸಾಧಾರ ಸಾಹಸ ಮಾಡುತ್ತಾರೆ. "ಅವನು ತೆಗೆದುಕೊಂಡ ಧಾರ್ಮಿಕ ನಿರ್ಣಯಗಳೆಲ್ಲಾ ಸಿಂಹಾಸನವನ್ನು ಬಲ ಪಡಿಸುವುದಕ್ಕಾಗಿಯೇ ಹೊರತು ಬೇರಾವುದಕ್ಕೂ ಅಲ್ಲ" ಎಂಬ ಕಾರಣ ಕೊಡುತ್ತಾರೆ. ‘ಹೊಸ ದೇವಾಲಯಗಳನ್ನು ನಿರ್ಮಿಸುವುದನ್ನು ನಿಲ್ಲಿಸಿದ್ದೇನೋ ನಿಜ, ಆದರೆ ಹಳೆ ದೇವಾಲಯಗಳನ್ನು ಪುನರುತ್ಥಾನಗೊಳಿಸಲು ಅಪ್ಪಣೆ ನೀಡಿ ದೇಣಿಗೆಯನ್ನು ನೀಡಿದ’ ಎಂದು ಹೇಳುತ್ತ ಆಧಾರಗಳನ್ನು ಒದಗಿಸುತ್ತಾರೆ. ಅಂದರೆ ಔರಂಗಜೇಬ ಮೂಲತಃ "ಹಿಂದೂ ದ್ವೇಷಿ" ಎಂಬುದು ಸುಳ್ಳು ಎಂಬುದು ಈ ವಿವರಗಳ ಸಾರವಿದೆ. ಔರಂಗಜೇಬನು ಹಿಂದೂ - ಮುಸ್ಲಿಂ ಭೇದ ಭಾವವಿಲ್ಲದೆ ಮಾಡಿದ ಕೆಲಸಗಳನ್ನು ನಿರೂಪಿಸುತ್ತದೆ. ಈ ನಿರೂಪಣೆಗೆ ಪೂರಕವಾಗಿ ಕಾಶಿ ವಿಶ್ವನಾಥ ದೇವಾಲಯ ಕೆಡವಿದ್ದಕ್ಕೆ ಪುರಾವೆಗಳಿಲ್ಲ ಎಂದು ಹೇಳುತ್ತ ಕಾಶಿಯ ನಾಗರಿಕರು ಶಾಂತಿಯುತವಾಗಿ ಜೀವನ ನಡೆಸಲಿ ಎಂದು ಬಯಸಿ, ಹಿಂದೂ ಪೂಜಾರಿಗೆ ಮುಸಲ್ಮಾನರು ಕೊಡುತ್ತಿದ್ದ ಕಿರುಕುಳ ತಪ್ಪಿಸಿದ್ದನ್ನೂ "ಹಿಂದೂ ಧರ್ಮ ಮತ್ತು ಹಿಂದೂಗಳೊಂದಿಗೆ ಸೌಹಾರ್ದಯುತ ವಾತಾವರಣ ನಿರ್ಮಿಸಲು ಮುಸಲ್ಮಾನರು ಸಹಕರಿಸಬೇಕೆಂದು ಆದೇಶ" ನೀಡಿದ್ದನ್ನೂ ಉಲ್ಲೇಖಿಸುತ್ತಾರೆ. ಜೊತೆಗೆ ಹಿಂದೂ ಪೂಜಾರಿಗಳಾದ ಬನಾರಸ್ ಜಿಲ್ಲೆಯ ಬಸ್ತಿ ಎಂಬ ಊರಿನ ನಿವಾಸಿ ಗಿರಿಧರ, ಮಹೇಶಪುರದ ಯದುನಾಥ ಮಿಶ್ರ, ಪಂಡಿತ ಬಲಭದ್ರ ಮಿಶ್ರರಿಗೆ ಔರಂಗಜೇಬ ಜಾಗೀರು ನೀಡಿದ್ದನ್ನು ಆಧಾರ ಸಹಿತ ಉಲ್ಲೇಖಿಸುತ್ತಾರೆ. ಒಟ್ಟಿನಲ್ಲಿ, ಔರಂಗಜೇಬ ಉದಾರತನದ ಮತ್ತೊಂದು ಮುಖದ ಅನಾವರಣ ಇಲ್ಲಿದೆ.
©2024 Book Brahma Private Limited.