ಹಿರಿಯ ಪತ್ರಕರ್ತ, ಲೇಖಕ ಖಾದ್ರಿ ಎಸ್.ಅಚ್ಯುತನ್ ಮೂಲತಃ ಮಂಡ್ಯ ಜಿಲ್ಲೆಯ ಮೇಲುಕೋಟೆಯವರು. ಮೈಸೂರಿನಲ್ಲಿ ಪ್ರೌಢಶಾಲೆ, ಪದವಿ ವ್ಯಾಸಂಗ ಮುಗಿಸಿದ ಅವರು ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಆರಂಭಿಸಿದರು. ನಂತರ 1966ರಲ್ಲಿ ಕೇಂದ್ರ ಸಮಾಚಾರ ಮತ್ತು ಪ್ರಸಾರ ಖಾತೆಯಲ್ಲಿ ಸೇವೆಗೆ ನಿಯುಕ್ತಿಪಡೆದರು, ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಣೆ, ಧಾರವಾಡ, ಪೋರ್ಟ್ಭೇರ್ ಆಕಾಶವಾಣಿಗಳಲ್ಲಿ ಸುದ್ದಿ ಸಂಪಾದಕ; ಬೆಂಗಳೂರು ದೂರದರ್ಶನದಲ್ಲಿ ಮೊದಲಿಗೆ ಸುದ್ದಿ ಸಂಪಾದಕ, ಆಮೇಲೆ ಸುದ್ದಿ ನಿರ್ದೇಶಕ, ಕನ್ನಡ ಯೋಜನಾ ಪತ್ರಿಕೆ ಸುದ್ದಿ ಸಂಪಾದಕ, ಸೆನ್ಸಾರ್ ಮಂಡಳಿ ಪ್ರಾದೇಶಿಕ ಅಧಿಕಾರಿ, ನಿವೃತ್ತಿ ನಂತರ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬೋಧನೆಮಾಡಿದ್ದಾರೆ. ಅಂಕಣ ಬರಹಗಾರರಾಗಿಯೂ ಪ್ರಸಿದ್ಧಿ ಪಡೆದಿರುವ ಅಚ್ಯುತನ್ ಅವರು ಹಲವು ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ‘ಕೆ.ಹೆಚ್. ರಾಮಯ್ಯ’, ‘ಬಿ. ಪುಟ್ಟಯ್ಯ’ (ಆತ್ಮಚರಿತ್ರೆ), ‘ಟಿವಿ ವರದಿಗಾರಿಕೆ’, ಇಸ್ರೋಗೆ ಕನ್ನಡದಲ್ಲಿ ಬಾನಂಗಳದಿಂದ- ಶ್ರೀಸಾಮಾನ್ಯನ ಬಳಿಗೆ ಇಸ್ರೋ ಪ್ರಕಟಿತ ಕೃತಿಗಳು.
ಸದಾ ಸಂತೋಷ, ಸಮಸ್ಯೆ ನಿಮ್ಮದು- ಪರಿಹಾರ ತೆನಾಲಿ ರಾಮನದು, ಅವರ ಅನುವಾದ ಕೃತಿಗಳು ಹಾಗೂ ಜರ್ಮನ್ ಡೈರಿ ಪ್ರವಾಸ ಕಥನ. ಎಳೆಯರಿಗಾಗಿ ಹಿರಿಯ ಪತ್ರಕರ್ತ ಖಾದ್ರಿ ಶಾಮಣ್ಣ ಜೀವನ - ಸಾಧನೆ ಕುರಿತ ಕಿರು ಹೊತ್ತಿಗೆಯನ್ನು ಪ್ರಕಟಿಸಿದ್ದಾರೆ, ಮುದ್ರಣಾ ಮಾಧ್ಯಮದಲ್ಲಿ ಕೆಲಸ ಮಾಡಿ ಪ್ರಸಾರ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಕೆಲವೇ ಕನ್ನಡ ಪತ್ರಕರ್ತರಲ್ಲಿ ಖಾದ್ರಿ ಎಸ್. ಅಚ್ಯುತನ್ ಸಹ ಒಬ್ಬರು. ವಿದ್ಯಾರ್ಥಿ ಜೀವನ ಕಾಲದಿಂದಲೂ ಸಮಾಜವಾದ, ಸರ್ವೋದಯ ತತ್ವಗಳ ಪ್ರಭಾವಕ್ಕೆ ಒಳಗಾಗಿದ್ದ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ, ರಾಜ್ಯೋತ್ಸವ, ಪಾಟೀಲ ಪುಟ್ಟಪ್ಪ, ಆರ್.ಎಚ್ ಕುಲಕರ್ಣಿ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.