ಕನ್ನಡದ ಪ್ರಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರು 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಅವರು ಮತ್ತು ತಾಯಿ ಚೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಅವರ ಹುಟ್ಟಿದೂರಿನಲ್ಲೇ ನೆರವೇರಿತು. ಮುಂದೆ ಅವರು ಹೈಸ್ಕೂಲುವರೆಗೆ ಕಲಿತದ್ದು ಕಾಸರಗೋಡಿನಲ್ಲಿ.
ಎಂಜನಿಯರ್ ಆಗಿದ್ದ ಅಬೂಬಕ್ಕರ್ ಅವರೊಡನೆ ಸಾರಾ ಅವರ ವಿವಾಹ ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ಓದಿನಲ್ಲಿ ಮಗ್ನರಾಗಿರುತ್ತಿದ್ದರು. ಮನೋವಿಜ್ಞಾನದ ಬಗ್ಗೆ ತ್ರಿವೇಣಿಯವರು ಬರೆದ ಕಾದಂಬರಿಗಳು ಸಾರಾ ಅವರಲ್ಲಿ ಆಕರ್ಷಣೆ ಹುಟ್ಟಿಸಿದವು.
ಅಣ್ಣ ತಂದುಕೊಡುತ್ತಿದ್ದ ವೈಕಂ ಮಹಮದ್ ಬಷೀರ್ ಅವರ ಕಾದಂಬರಿಗಳ ಓದಿನ ಪ್ರಭಾವದಿಂದ ಅವರಲ್ಲಿ ಬರೆಯಬೇಕೆಂಬ ಅಂತರಾಳದ ಒತ್ತಡ ನಿರಂತರವಾಗಿ ಹೊರಹೊಮ್ಮುತ್ತಿತ್ತು. ಹಲವಾರು ವರ್ಷ ಸಾಮಾಜಿಕ ಸಮಸ್ಯೆಗಳ ಮಥನದಿಂದಾಗಿ ಎಂ.ಕೆ.ಇಂದಿರಾ ಅವರಂತೆ ನಲವತ್ತು ದಾಟಿದ ನಂತರ ಸಾರಾ ಅಬೂಬಕ್ಕರ್ ಬರೆಯಲು ಪ್ರಾರಂಭಿಸಿದರು. ಹೀಗೆ ಅವರು ಬರೆದ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಈ ಕಥೆಯಲ್ಲಿ ಹೊರಹೊಮ್ಮಿದ ವಾಸ್ತವಿಕ ಬದುಕಿನ ಚಿತ್ರಣ ಮತ್ತು ಧರ್ಮದ ಕಟ್ಟುಪಾಡುಗಳಲ್ಲಿ ಶೋಷಿತಗೊಂಡ ಮಹಿಳೆಯರ ಧ್ವನಿಗಳು ಅಸಂಖ್ಯಾತ ಓದುಗರ ಹೃದಯವನ್ನು ತಟ್ಟಿ ಈ ಕಾದಂಬರಿ ಎಲ್ಲೆಡೆಯಿಂದ ಮೆಚ್ಚುಗೆ ಪಡೆಯಿತು.
ಆ ನಂತರದಲ್ಲಿ ಸಾರಾ ಅವರು ಬರೆದ ಇತರ ಹಲವಾರು ಕಾದಂಬರಿಗಳೆಂದರೆ ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ (ಸುಳಿಯಲ್ಲಿ ಸಿಕ್ಕವರು ಕೃತಿಯ ಭಾಗ-೨), ತಳ ಒಡೆದ ದೋಣಿ, ಪಂಜರ ಮುಂತಾದವು.
ಸಾರಾ ಅಬೂಬಕ್ಕರ್ ಅವರ ಕಥಾ ಸಂಕಲನಗಳು-ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ ಮುಂತಾದವು. ಬಾನುಲಿ ನಾಟಕಗಳು-ಕಮರಿದ ಕನಸು, ಮಗಳು ಹುಟ್ಟಿದಳು, ತೇಲಾಡುವ ಮೋಡಗಳು, ತಾಳ, ಹೀಗೂ ಒಂದು ಬದುಕು ಮುಂತಾದುವು.ಲೇಖನ ಮತ್ತು ಅನುವಾದಗಳು-ಲೇಖನ ಗುಚ್ಛ, ಮನೋಮಿ, ಬಲೆ, ನಾನಿನ್ನು ನಿದ್ರಿಸುವೆ (ಕಾದಂಬರಿಗಳು).
ಸಾರಾ ಅಬೂಬಕ್ಕರ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ‘ಸಹನಾ’ ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ‘ಸುಳಿಯಲ್ಲಿ ಸಿಕ್ಕವರು’ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಮತ್ತು ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಮುಂತಾದ ಹಲವಾರು ಪ್ರಮುಖ ಪ್ರಶಸ್ತಿ ಗೌರವಗಳು ಸಂದಿವೆ.
ಜನವರಿ 10, 2023ರಂದು ನಿಧನರಾದರು.