ಮಹಾರಾಷ್ಟ್ರದ ಹಿರಿಯ ಚಿಂತಕ ಆನಂದ್ ತೇಲ್ತುಂಬ್ಡೆ ಬರೆದ ಪ್ರಸ್ತುತ ಕೃತಿ ಜಾಗತೀಕರಣದ ಸಂದರ್ಭದಲ್ಲಿ ದಲಿತರ ಸ್ಥಿತಿಗತಿಗಳನ್ನು ಮನಮುಟ್ಟುವಂತೆ ವಿವರಿಸುತ್ತದೆ. ಜಾಗತೀಕರಣ ದಲಿತರಿಗೆ ಒಳಿತನ್ನು ತರಬಲ್ಲದು ಎಂಬ ಮಾತು ಅದು ಅವತರಿಸಿದ ಘಟ್ಟದಲ್ಲಿತ್ತು. ಆದರೆ ಅದು ಮದ್ದಗಾಗುವ ಬದಲು ಮಾರಕವಾಯಿತು. ಜಾಗತೀಕರಣ ಶೋಷಿತರನ್ನು ಮಾಯಾವಿಯಾಗಿ ಕಾಡಿದ ಸಂಗತಿಯನ್ನು ವಿವರವಾಗಿ ಕೃತಿಯಲ್ಲಿ ತೆರೆದಿಡಲಾಗಿದೆ.
ಕೃತಿಯನ್ನು ಕನ್ನಡಕ್ಕೆ ತಂದಿರುವ ನಾ. ದಿವಾಕರ್, ’ನವ ಉದಾರವಾದ ನೀತಿಯೂ ಸಹ ತನ್ನ ಆಕ್ರಮಣಕಾರಿ ಪ್ರವೃತ್ತಿಯನ್ನು ಬದಿಗಿಟ್ಟು, ನೊಂದ ಜನಸಮುದಾಯಗಳ ಮನಗೆಲ್ಲಲು ವಿಭಿನ್ನ ತಂತ್ರಗಳನ್ನು ಅನುಸರಿಸುತ್ತಿದೆ. ನವ ಉದಾರವಾದದ ಕರಾಳ ಬಾಹುಗಳನ್ನು ಪ್ರತಿರೋಧಿಸುವ ಜನಪರ ಚಳವಳಿಗಳನ್ನು ದೇಶದ ಭದ್ರತೆಗೆ ಮಾರಕ ಎಂದು ಬಿಂಬಿಸುವುದು ಈ ತಂತ್ರಗಳಲ್ಲಿ ಒಂದಾಗಿದೆ. ವಿಪರ್ಯಾಸವೆಂದರೆ ದೇಶದ ದಲಿತ ಸಮುದಾಯಗಳು, ಸಾಮುದಾಯಿಕ ಪ್ರಜ್ಞೆಯನ್ನೇ ಕಳೆದುಕೊಳ್ಳುತ್ತಿರುವ ಸಂಘಟನೆಗಳು ಅಳ್ಳಿಕರ ಈ ತಂತ್ರಕ್ಕೆ ಸುಲಭವಾಗಿ ತುತ್ತಾಗುತ್ತಿವೆ ಎಂದು ಮುನ್ನುಡಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಜಾಗತೀಕರಣದ ಚಾರಿತ್ರಿಕ ದೃಷ್ಟಿಕೋನ, ಅದು ಭಾರತ ಪ್ರವೇಶಿಸಿದ ಸಂದರ್ಭ, ದಲಿತರ ಸ್ಥಿತ್ಯಂತರ, ದಲಿತರ ವಾಸ್ತವ ಸ್ಥಿತಿ, ಸುಧಾರಣೆ ಬಡಜನರನ್ನು ಪ್ರಭಾವಿಸಿರುವ ರೀತಿ ಇತ್ಯಾದಿ ಮಹತ್ವದ ವಿಚಾರಗಳು ಕೃತಿಯಲ್ಲಿ ಚರ್ಚಿತವಾಗಿವೆ.
©2024 Book Brahma Private Limited.