ಕಾರ್ಲ್ಮಾರ್ಕ್ಸ್ ಜನಿಸಿ ಎರಡು ಶತಮಾನಗಳು ಸಂದ ಹೊತ್ತಿನಲ್ಲಿ ಆತನ ಕೊಡುಗೆಗಳನ್ನು ವಿವಿಧ ಬಗೆಯಲ್ಲಿ ನೆನೆಯುವ ಕಾರ್ಯಗಳು ಜಗತ್ತಿನಾದ್ಯಂತ ನಡೆದವು. ಭಾರತವೂ ಅದಕ್ಕೆ ಹೊರತಾಗಿರಲಿಲ್ಲ. ಕೇರಳ ಮತ್ತು ಈಶಾನ್ಯ ರಾಜ್ಯಗಳ ಜನರಿಗೆ ಮಾರ್ಕ್ಸ್ ಮೇಲಿರುವ ಪ್ರೀತಿ ಸೈದ್ಧಾಂತಿಕ ಕಾರಣಗಳಿಗಾಗಿ ಮಾತ್ರವಲ್ಲದೆ ಚುನಾವಣಾ ರಾಜಕಾರಣದಲ್ಲಿ ಕೂಡ ವ್ಯಕ್ತವಾಗಿದೆ. ಇದು ಆತನ ಜನಪ್ರಿಯತೆಗೆ ಸಾಕ್ಷಿ. ಆದರೆ ಭಾರತದ ಮಾರ್ಕ್ಸ್ವಾದ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಭಾರತೀಯ ಸಂದರ್ಭದ ಎಡಪಂಥೀಯ ವಿಚಾರಧಾರೆಗೆ ವಿಶಿಷ್ಟ ಲಕ್ಷಣವಿದೆ. ಮಾರ್ಕ್ಸ್ವಾದ ಮೊದಲು ಇಲ್ಲಿನ ಮೇಲ್ಜಾತಿಯವರನ್ನು ಆಕರ್ಷಿಸಿತು. ದಲಿತರು ಎಡಪಂಥೀಯ ಚಳವಳಿಯನ್ನು ಅನುಮಾನದಿಂದ ನೋಡುತ್ತ ದೂರವೇ ಉಳಿದರು. ಇದು ಕಮ್ಯುನಿಸಂಗೆ ಪೆಟ್ಟು ನೀಡಿದ್ದಂತೂ ನಿಜ. ಈಗ ’ಲಾಲ್-ನೀಲ್’ ಘೋಷಣೆಗಳು ಅಲ್ಲಲ್ಲಿ ಆಗಾಗ ಕೇಳಿಬರುತ್ತಿರುವುದು ಇದೇ ಕಾರಣಕ್ಕಾಗಿ.
ಮಾರ್ಕ್ಸ್ ದ್ವಿಶತ ಜನ್ಮದಿನೋತ್ಸವದ ಅಂಗವಾಗಿ ದೇಶದ ಅನೇಕ ಕಡೆಗಳಂತೆ ಕರ್ನಾಟಕದಲ್ಲೂ ಹಲವು ಪ್ರಕಾಶಕರು ಮಾರ್ಕ್ಸ್ ಕೃತಿಗಳನ್ನು ಹೊರತಂದಿದ್ದಾರೆ. ಅವುಗಳಲ್ಲಿ ಲಡಾಯಿ ಪ್ರಕಾಶನದ 'ಕಾರ್ಲ್ ಮಾರ್ಕ್ಸ್-ತತ್ವಶಾಸ್ತ್ರದ ಬಡತನ' ಕೂಡ ಒಂದು. ಮಾರ್ಕ್ಸ್ವಾದ ಚಿಗುರುತ್ತಿದ್ದ ಹೊತ್ತಿನಲ್ಲಿ ಅದನ್ನು ಭಂಜಿಸುವ ಕೆಲಸಗಳೂ ಬೌದ್ಧಿಕ ಮಟ್ಟದಲ್ಲಿ ನಡೆಯುತ್ತಿದ್ದವು. ಪ್ರೊಧಾನ್ ಮಾರ್ಕ್ಸ್ವಾದದ ಕಟುಟೀಕಾಕಾರರಾಗಿದ್ದರು. ಆದರೆ ಇದಕ್ಕೆ ಮಾರ್ಕ್ಸ್ ಮತ್ತು ಏಂಗೆಲ್ಸ್ ನೀಡಿದ ಉತ್ತರ ರೂಪವೇ ಈ ಕೃತಿ. ಬಳಸಿರುವ ಭಾಷೆ ಸರಳವಾಗಿರುವುದರಿಂದ ಸಾಮಾನ್ಯ ಓದುಗರನ್ನೂ ಕೃತಿ ಆಕರ್ಷಿಸುತ್ತದೆ. ಮಾರ್ಕ್ಸ್ ಪ್ರಸ್ತುತತೆಯನ್ನು ಕೂಡ ಕೃತಿಯಲ್ಲಿ ಚರ್ಚಿಸಲಾಗಿದೆ.
©2024 Book Brahma Private Limited.