ಭಾರತೀಯ ಸಂಸ್ಕೃತಿಯಲ್ಲಿ ಹಿಂದು, ಜೈನ, ಬೌದ್ಧ ಧಾರ್ಮಿಕ ವಿಧಿವಿಧಾನಗಳಲ್ಲಿ 'ಸಂಸ್ಕಾರ'ದ ಉಲ್ಲೇಖವನ್ನು ನೋಡುತ್ತೇವೆ. ಸ್ಕೂಲಾರ್ಥದಲ್ಲಿ ಸಂಸ್ಕಾರವೆಂದರೆ ಮನುಷ್ಯನೊಬ್ಬ ತನ್ನ ಜೀವನದಲ್ಲಿ ನಡೆಸಬೇಕಿರುವ ಕೆಲವು ಮುಖ್ಯ ಆಚರಣೆಗಳು, ಪುಂಸವನದಿಂದ ಅಂತ್ಯೇಷ್ಟಿಯವರೆಗಿನ ಅಂಥ 16 ಸಂಸ್ಕಾರಗಳನ್ನು ಧರ್ಮಶಾಸ್ತ್ರಗ್ರಂಥಗಳಲ್ಲಿ ಹೇಳಲಾಗಿದೆ. ವ್ಯಕ್ತಿಯು ಶಿಶುರೂಪದಲ್ಲಿ ಭೂಮಿಗೆ ಬರುವುದಕ್ಕೆ ಮೊದಲು, ಭ್ರೂಣರೂಪದಲ್ಲಿದ್ದಾಗಲೇ ಆ ಭ್ರೂಣದ ದೈಹಿಕ ಆರೋಗ್ಯಕ್ಕಾಗಿ ತಾಯಿಯನ್ನು ಬಗೆಬಗೆಯಲ್ಲಿ ಸಂತೋಷಪಡಿಸಬೇಕು; ಆಕೆಯನ್ನು ತಾಯ್ತನದ ದಿನಗಳಿಗಾಗಿ ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಸಿದ್ಧಗೊಳಿಸಬೇಕು ಎಂಬ ಅತ್ಯಂತ ವೈಜ್ಞಾನಿಕವಾದ ಚಿಂತನೆ ಪುಂಸವನ ಸಂಸ್ಕಾರದ ಹಿನ್ನೆಲೆಯಲ್ಲಿದೆ. ಹಾಗೆಯೇ ವ್ಯಕ್ತಿಯೊಬ್ಬ ತೀರಿಕೊಂಡ ಬಳಿಕ ಆತನನ್ನು ಪಶುವಿನಂತೆ ಎಲ್ಲೆಂದರಲ್ಲಿ ಎಸೆದು ಕೈತೊಳೆದುಕೊಳ್ಳದೆ, ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಘನತೆಯಿಂದ ಬೀಳ್ಕೊಡುವ ಕ್ರಮವನ್ನೂ ಅಂತ್ಯೇಷ್ಟಿಯ ಸಂಸ್ಕಾರವು ತಿಳಿಸಿಕೊಡುತ್ತದೆ. ಮಗು ಹುಟ್ಟಿದ ಬಳಿಕ ನಡೆಸುವ ಜಾತಕರ್ಮ, ಅನ್ನಪ್ರಾಶನ, ಕರ್ಣವೇಧ, ನಾಮಕರಣ, ಚೌಲ ಮುಂತಾದ ಸಂಸ್ಕಾರಗಳು ಮಕ್ಕಳ ಲಾಲನೆಪಾಲನೆಯ ವಿಷಯದಲ್ಲಿ ಒಂದು ಶಿಸ್ತು, ಕ್ರಮಬದ್ಧತೆಯನ್ನು ಕೂಡ ಮೂಡಿಸುತ್ತವೆ. ಬೆಳೆಯುವ ಮಕ್ಕಳಿಗೆ ನಡೆಸುವ ಅಕ್ಷರಾಭ್ಯಾಸ, ವೇದಾರಂಭ, ಉಪನಯನ ಮುಂತಾದ ಸಂಸ್ಕಾರಗಳು ಕೂಡ ಹಿರಿದರ್ಥವನ್ನು ಅಡಗಿಸಿಕೊಂಡ ಅರ್ಥಪೂರ್ಣ ಆಚರಣೆಗಳೇ ಆಗಿವೆ. ಆಚರಣೆ ಯಾಂತ್ರಿಕವಾಯಿತು ಎಂಬ ಕಾರಣಕ್ಕೇ ಅದರ ಅರ್ಥ, ಧೈಯ, ಸಂಕಲ್ಪ, ಆಶಯಗಳೆಲ್ಲವೂ ನಿರರ್ಥಕ ಎಂಬ ನಿರ್ಣಯಕ್ಕೆ ಬರಲಾಗದು. ಈ ಕಿರು ಹೊತ್ತಗೆಯಲ್ಲಿ ಸಂಸ್ಕಾರಗಳ ವ್ಯಾಪಕಾರ್ಥವನ್ನು ತೆಗೆದುಕೊಂಡು, ಆಚರಣೆಗಳು ಕೇವಲ ಒಣ ಕಸರತ್ತುಗಳಾಗದೆ ಅರ್ಥವತ್ತಾದ ಪ್ರಕ್ರಿಯೆಗಳಾಗುವುದು ಹೇಗೆ ಎಂಬುದನ್ನು ಮನದಟ್ಟಾಗುವಂತೆ ವಿವರಿಸಲಾಗಿದೆ. ಮಂತ್ರದ ಅರ್ಥವನ್ನು ತಿಳಿದು ಉಚ್ಚರಿಸಿದರೆ ಹೇಗೆ ಹೆಚ್ಚು ಫಲವೋ ಹಾಗೆ ಸಂಸ್ಕಾರಗಳನ್ನು ಅರಿತು ಆಚರಿಸುವುದರಲ್ಲಿದೆ ಅವುಗಳ ಸಾರ್ಥಕ್ಯ.
©2024 Book Brahma Private Limited.