`ಗಂಗಾಲಹರಿ ಸ್ತೋತ್ರ’ ಕೃತಿಯು ಕೆ. ಗಣಪತಿ ಭಟ್ಟ ಅವರ ಸಂಪಾದಿತ ಸ್ತೋತ್ರ ಕೃತಿಯಾಗಿದೆ. ಈ ಪುಸ್ತಕದಲ್ಲಿ ಗಂಗಾಲಹರಿಸ್ತೋತ್ರದ ಭಾವಾರ್ಥ ಬದಲಿಗೆ ಕನ್ನಡದ ಜಗನ್ನಾಥ ಎಂದೇ ಖ್ಯಾತರಾದ ಪಂ. ಗಲಗಲಿ ಪಂಢರಿನಾಥಾಚಾರ್ಯರು ಬರೆದ ಕಾವ್ಯರೂಪ ಕನ್ನಡ ಗಂಗಾಲಹರಿಯನ್ನು ಮುದ್ರಿಸಲಾಗಿದೆ. ವರಕವಿ ಬೇಂದ್ರೆ, ವಿ. ಕೃ. ಗೋಕಾಕ ಮುಂತಾದ ಗಣ್ಯರು ಈ ಕೃತಿಯನ್ನು ಮೆಚ್ಚಿ ಹೊಗಳಿದ್ದಾರೆ. ಗಂಗಾಲಹರಿ ಸಂಸ್ಕೃತಸ್ತೋತ್ರಪಠನದಷ್ಟೇ ಮುಖ್ಯವಾದದ್ದು ಅದರ ಕರ್ತೃ ಪಂಡಿತರಾಜ ಜಗನ್ನಾಥಕವಿಯ ಜೀವನಚರಿತ್ರೆ ತಿಳಿಯುವುದಾಗಿದೆ. ಕವಿಯ ಪರಿಚಯವನ್ನು ಪಂಢರಿನಾಥಾಚಾರ್ಯರು ತಮ್ಮದೇ ಆದ ಅದ್ಭುತ ಶೈಲಿಯಲ್ಲಿ ಪೋಣಿಸಿದ್ದಾರೆ. ಅದನ್ನು ಲಘುಪುಸ್ತಕ ಹಾಗೂ ಧ್ವನಿಮುದ್ರಿಕೆಯ ರೂಪದಲ್ಲಿ ಪ್ರಕಟಿಸುವ ಸಂಕಲ್ಪವನ್ನು ಪ್ರತಿಷ್ಠಾನ ಮಾಡಿದೆ. ಅದೇ ಶೈಲಿಯಲ್ಲಿ ಗಲಗಲಿ ಆಚಾರ್ಯರ ಪರಿಚಯವನ್ನೂ ಲಿಖಿತಗೊಳಿಸುವಂತೆ ಅವರ ಶಿಷ್ಯರಾದ ಧಾರವಾಡದ ಡಾ. ವೆಂಕಟನರಸಿ೦ಹಾಚಾರ್ಯ ಜೋಶಿ ಅವರನ್ನು ನಿವೇದಿಸಲಾಗಿದೆ.
ವಿದ್ವತ್ತು, ಸಂಗೀತ, ಯೋಗ, ಅಧ್ಯಾಪನ, ಆಚರಣೆ, ಉಪನ್ಯಾಸ, ಬರವಣಿಗೆ, ಸಂಘಟನೆ, ಸಮಾಜಸೇವೆ, ಅಧ್ಯಾತ್ಮ ಮುಂತಾದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವವರು ಡಾ. ಗಣಪತಿ ಭಟ್ಟ. 1960ರಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಾಂತೂರು ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದರು. ಅವರು ಧಾರವಾಡದಲ್ಲಿ ನ್ಯಾಯಶಾಸ್ತ್ರ, ವ್ಯಾಕರಣ ಮತ್ತು ಸಂಗೀತ ಅಭ್ಯಾಸ ಪೂರೈಸುತ್ತಿರುವಾಗಲೇ 1987 ರಲ್ಲಿ ಅನಾಯಾಸವಾಗಿ ದೊರೆತ ಶಿಕ್ಷಕವೃತ್ತಿಯೊಂದಿಗೆ ನೂರಾರು ವಟುಗಳಿಗೆ ಚತುರ್ವೇದ ಮಂತ್ರಗಳನ್ನು, ಮಹಿಳೆಯರಿಗೆ ರಾಗಸಹಿತವಾಗಿ ಸ್ತೋತ್ರಗಳನ್ನು, ವಿದ್ಯಾರ್ಥಿಗಳಿಗೆ ಸುಭಾಷಿತ-ಭಗವದ್ಗೀತೆಗಳನ್ನು ವರ್ಗ-ಶಿಬಿರಗಳ ಮೂಲಕ ಸುಸ್ವರವಾಗಿ ಬೋಧಿಸಿದ್ದಾರೆ. ವೇದಿಕೆಗಳನ್ನೂ ಕಲ್ಪಿಸಿದ್ದಾರೆ. ವಿವಿಧ ಸಂಸ್ಥೆಗಳ ಮೂಲಕ 50ಕ್ಕೂ ಹೆಚ್ಚು ಪುಸ್ತಕ-ಧ್ವನಿಮುದ್ರಿಕೆಗಳನ್ನು ಪ್ರಕಟಿಸಿದ್ದಲ್ಲದೇ ಹತ್ತು ವರ್ಷಗಳಲ್ಲಿ ಸಹಸ್ರಾಧಿಕ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ. ...
READ MORE