ನಮ್ಮ ಕಾಲದ ಬುದ್ಧರಂತಿರುವ ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಪ್ರವಚನದ ಸಾರವನ್ನು ಸಾಮಾನ್ಯರಿಂದ ಪಂಡಿತರಿಗೂ ಅರ್ಥವಾಗುವ ರೀತಿಯಲ್ಲಿ ನಿರೂಪಿಸಲಾಗಿದೆ. ಮಾನವೀಯ ಪ್ರೀತಿಗೆ ಇಲ್ಲಿನ ಬರಹ ಸಾಕ್ಷಿಯಾಗಿದೆ. ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನವೆಂದರೆ ಅದೊಂದು ರೀತಿಯ ನಿಶ್ಯಬ್ದ. ಆ ನಿಶ್ಯಬ್ದವನ್ನು ಶಬ್ದಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಈ ಕೃತಿಯಲ್ಲಿದೆ. ಶಬ್ದ ನಾಚದಂತೆ ಪ್ರಾಂಜಲವಾಗಿ ಪ್ರವಚನದ ಆಶಯಗಳನ್ನು ಕಟ್ಟಿ ಕೊಡಲಾಗಿದೆ. ಶ್ರೀಗಳ ಪ್ರವಚನ ಸಾರವನ್ನು ಕೇವಲ ಸಾರಾಂಶ ರೂಪದಲ್ಲಿ ಸಂಗ್ರಹಿಸದೆ. ಅವರ ಅಧ್ಯಾತ್ಮದ ಆಳಕ್ಕಿಳಿದು ಅವರು ಬಳಸುವ ಪದ-ಪುಂಜಗಳನ್ನು ಬಳಸಿ ಬರೆಯಲಾಗಿರುವ ಈ ಕೃತಿಯನ್ನು ಓದುತ್ತಿದ್ದರೆ ಸ್ವತಃ ಸಿದ್ಧೇಶ್ವರ ಸ್ವಾಮೀಜಿಗಳೇ ನಮ್ಮೆದುರಿಗೆ ಕುಳಿತು ಪ್ರವಚನ ಹೇಳುತ್ತಿದ್ದಾರೆ ಎನಿಸುತ್ತದೆ. ಓದುಗನ ಮನಸ್ಸಿಗೆ ನೆಮ್ಮದಿ ನೀಡುವ ತಂಗುದಾಣಗಳಂತಿರುವ ವಿಷಯ, ವಸ್ತುಗಳು ಇಲ್ಲಿನ ಪುಟ್ಟ ಪುಟ್ಟ ಬರಹಗಳಲ್ಲಿವೆ. ಕೇವಲ ಒಂದೇ ವರ್ಷದಲ್ಲಿ ೮ ಮುದ್ರಣ ಕಂಡಿರುವುದು ಈ ಪುಸ್ತಕದ ಹೆಚ್ಚುಗಾರಿಕೆಯಾಗಿದೆ. ಶರಣ ಸಾಹಿತಿ ರಂಜಾನ್ ದರ್ಗಾ ಮುನ್ನಡಿ, ಡಾ. ಎಂ.ಎಸ್. ಪಾಟೀಲ ಬೆನ್ನುಡಿ ಬರೆದಿದ್ದಾರೆ.
ಪತ್ರಕರ್ತ-ಲೇಖಕ ಶಿವರಂಜನ್ ಸತ್ಯಂಪೇಟೆ ಅವರು ಹೈದರಾಬಾದ್ ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ಚಿರಪರಿಚಿತರು. 1973ರ ಏಪ್ರಿಲ್ 1ರಂದು ಶಹಾಪುರದಲ್ಲಿ ಜನಿಸಿದರು. ತಂದೆ ಹೆಸರಾಂತ ಪತ್ರಕರ್ತ-ವಿಚಾರವಾದಿ ಲಿಂಗಣ್ಣ ಸತ್ಯಂಪೇಟೆ. ತಂದೆಯ ಪ್ರಖರ ವೈಚಾರಿಕತೆಯ ಬೆಳಕಿನಲ್ಲಿ ಬೆಳೆದ ಶಿವರಂಜನ್ ಅವರು ಕಲ್ಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕ (ಬಿ.ಎ.) ಮತ್ತು ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿದ್ದಾರೆ. ಶಹಾಪುರದ ಚರಬಸವೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಬಾಪುಗೌಡ ದರ್ಶನಾಪುರ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವಾಗಲೇ ಹವ್ಯಾಸಿ ಪತ್ರಕರ್ತ ಆಗಿದ್ದರು. ಸಂಜೆವಾಣಿ ಪತ್ರಿಕೆಯ ಶಹಾಪುರದ ವರದಿಗಾರರಾಗಿದ್ದರು. ನಂತರ ಪೂರ್ಣ ಪ್ರಮಾಣದಲ್ಲಿ ಪತ್ರಿಕಾ ವೃತ್ತಿಗೆ ...
READ MORE