ಲೇಖಕ ಡಾ.ವಿಜಯಕುಮಾರ ಜಿ ಪರುತೆ ಅವರು ಸಂಪಾದಿಸಿದ ಕೃತಿ-ಭರತನೂರಿನ ಭಗವಂತ. ಶ್ರೀ ಗುರುನಂಜೇಶ್ವರ ಶಿವಯೋಗಿಗಳು ಲಿಂಗೈಕ್ಯರಾಗಿ 25 ವರ್ಷಗಳು ಗತಿಸಿದ ಪುಣ್ಯ ಸ್ಮರಣೆಯಲ್ಲಿ ರಜತ ಮಹೋತ್ಸವದ ಸ್ಮರಣ ಸಂಚಿಕೆಯಾಗಿ ಈ ಕೃತಿ ಪ್ರಕಟವಾಗಿದೆ. ಈ ಕೃತಿಗೆ ಶ್ರೀಮತಿ ಮಧುಮತಿ ವಿಜಯಕುಮಾರ ಪರುತೆ ಕಾಳಗಿ ಇವರು ಗ್ರಂಥ ದಾಸೋಹಿಗಳು. ಬಳ್ಳಾರಿಯ ಡಾ.ಶ್ರೀ ಜಗದ್ಗುರು ಸಂಗನ ಬಸವ ಮಹಾಸ್ವಾಮಿಗಳು, ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ಸುತ್ತೂರಿನ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಹಾಗೂ ಹುಲಸೂರಿನ ಶ್ರೀ ಶಿವಾನಂದ ಮಹಾಸ್ವಾಮಿಗಳ ಶುಭ ಸಂದೇಶಗಳಿವೆ. ಭರತನೂರಿನ ವಿರಕ್ತಮಠದ 10ನೇ ಪೀಠಾಧಿಪತಿ ಶ್ರೀ ಚಿಕ್ಕ ಗುರುನಂಜೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದಿದ್ದು, ಅಧ್ಯಾತ್ಮಕ ಒಳನೋಟಗಳನ್ನು ಈ ಕೃತಿಯು ನೀಡುತ್ತದೆ. ಈ ಕೃತಿಯು ಮೂರು ಭಾಗ ಹೊಂದಿದೆ, ಭಾಗ-1ರಲ್ಲಿ ಮಹಾತಪಸ್ವಿ ಶ್ರೀ ಗುರುನಂಜೇಶ್ವರ ಶಿವಯೋಗಿಗಳ ಜೀವನ ಹಾಗೂ ಸಮಾಜಸೇವೆ, ಆಧ್ಯಾತ್ಮಿಕ ಸಾಧನೆ ಕುರಿತು"ಶ್ರೀಗಳ ವ್ಯಕ್ತಿತ್ವ ದರ್ಶನ" ಶಿರೋನಾಮೆಯಲ್ಲಿ 11ಲೇಖನಗಳು, ಭಾಗ-2ರಲ್ಲಿ ಶ್ರೀ ಗಳ ಕುರಿತು ವಿವಿಧ ಕವಿಗಳಿಂದ 10 ಕವನಗಳು ಹಾಗೂ ಭಾಗ-3 ರಲ್ಲಿ 15 ಜನ ಹಿರಿಯ ಸಾಹಿತಿಗಳ ಭಕ್ತಿ ಪರ ಲೇಖನಗಳಿವೆ. ಲಿಂ. ಶ್ರೀ ಗುರುನಂಜೇಶ್ವರ ಶಿವಯೋಗಿಗಳು ಮಹಾತಪಸ್ವಿಗಳು, ತ್ರಿಕಾಲ ಜ್ಞಾನಿಗಳು,ತ್ರಿಕಾಲ ಪೂಜಾ ನಿಷ್ಠರು, ತ್ರಿವಿಧ ದಾಸೋಹ ನಡೆಸಿ ಕೊಂಡು ಬಂದಿದ್ದರು. ಪೂಜ್ಯರು ಸರಳ ಜೀವನ, ನಿರಾಡಂಬರ ವ್ಯಕ್ತಿತ್ವ, ಅಂತರಂಗ ಬಹಿರಂಗ ಶುದ್ಧಿ, ಲಿಂಗಪೂಜಾ ನಿಷ್ಠೆಯಿಂದ ಸದಾಚಾರ ಸಂಪನ್ನರಾಗಿದ್ದರು. ಅವರು ತಮ್ಮ ಜೀವಿತಾವಧಿಯಲ್ಲಿ 34 ಸಲ 41 ದಿವಸಗಳ ವರೆಗೆ ಮೌನವಾಗಿ ಲೋಕ ಕಲ್ಯಾಣಕ್ಕಾಗಿ ತಪವಗೈದರು. ಇಂತಹ ಅಪರೂಪದ ವ್ಯಕ್ತಿತ್ವದ ಮಹಾತಪಸ್ವಿ ಶ್ರೀ ಗುರುನಂಜೇಶ್ವರ ಶಿವಯೋಗಿಗಳ ನೆನಪಿನಲ್ಲಿ ಪುಣ್ಯಸ್ಮರಣೆ ರಜತ ಮಹೋತ್ಸವದ ಸ್ಮರಣ ಸಂಚಿಕೆ ಧರ್ಮ, ಸಾಹಿತ್ಯ, ಆಧ್ಯಾತ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಲೇಖನಗಳು ಒಳಗೊಂಡಿವೆ.
©2025 Book Brahma Private Limited.